ಉಡುಪಿ: ಸಂಘ-ಸಂಸ್ಥೆಗಳು ಸನ್ಮಾನ, ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಕಠಿಣ ಕ್ರಮ-ಜಿಲ್ಲಾಡಳಿತ ಎಚ್ಚರಿಕೆ
ಉಡುಪಿ (ಉಡುಪಿ ಟೈಮ್ಸ್ ವರದಿ) ಮದುವೆ ಕಾರ್ಯಕ್ರಮವನ್ನು ಮಾತ್ರ ಅವರವರ ಮನಯಲ್ಲಿ ಗರಿಷ್ಠ 40 ಜನರ ಮಿತಿಗೊಳ ಪಟ್ಟು ನಡೆಸಲು ಅನುಮತಿಸಲಾಗಿದೆ. ಈ ನಡುವೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಂಡು ಬಂದಿದೆ.
ಇವು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಹಾಗೂ ಇಂತಹ ಕಾರ್ಯಕ್ರಮಗಳಿಂದ ಈವರೆಗೆ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಅಲ್ಲದೆ ಪ್ರಕರಣಗಳಲ್ಲಿ ಏರಿಕೆಯಾಗುವ ಸಂಭವವಿದೆ. ಆದುದರಿಂದ, ಸಂಘ-ಸಂಸ್ಥೆಗಳು ಸಾರ್ವಜನಿಕರು ಯಾವುದೇ ಸನ್ಮಾನದಂತಹ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಕೋರಲಾಗಿದೆ. ಹಾಗೂ ಆಹಾರ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಮುಂತಾದ ವೈದ್ಯಕೀಯ ಪರಿಕರಗಳನ್ನು ವಿತರಿಸುವ ಸಂಘ ಸಂಸ್ಥೆಗಳು ಯಾವುದೇ ಸಭೆ ಸಮಾರಂಭಗಳನ್ನು ಆಯೋಜಿಸದೇ ವಸ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡುವಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ಇನ್ನು ಮುಂದೆ ಯಾವುದೇ ಸಂಘ-ಸಂಸ್ಥೆಗಳು/ಸಾರ್ವಜನಿಕರು ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ಗಳ ಮತ್ತು ಸಾರ್ವಜನಿಕರ ಸತತ ಸಹಕಾರದಿಂದ ಕೋವಿಡ್ ನಿಯಂತ್ರಿಸುವಲ್ಲಿ ಗಣನೀಯ ಯಶಸ್ಸನ್ನು ಕಂಡಿದೆ. ಕೋವಿಡ್ ಪಾಸಿಟಿವಿಟಿ ಪ್ರಕರಣಗಳು ತೀವ್ರಗತಿಯಲ್ಲಿ ಇಳಿಮುಖ ಕಂಡಿದೆ ಅದ್ದರಿಂದ ಜಿಲ್ಲೆಯ ಲಾಕ್ ಡೌನ್ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ.