ಪೊಲೀಸರ ಹಲ್ಲೆಯಿಂದಲೇ ರಾಯ್ ಡಿಸೋಜಾ ಸಾವು ಆರೋಪ- 8 ಪೊಲೀಸರ ಅಮಾನತು

ವಿರಾಜಪೇಟೆ: ತೀವ್ರ ಹಲ್ಲೆಗೊಳಗಾಗಿ ಪಟ್ಟಣದ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜಾ (50) ಅವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಎಂಟು ಮಂದಿ ಪೊಲೀಸರನ್ನು ಅಮಾನತು ಪಡಿಸಲಾಗಿದೆ. ಪೊಲೀಸರ ಹಲ್ಲೆಯಿಂದಲೇ ರಾಯ್‌ ಅವರು ಮೃತಪಟ್ಟಿದ್ದಾಗಿ ಕುಟುಂಬದ ಸದಸ್ಯರು, ಸಮುದಾಯದ ಮುಖಂಡರು ಆರೋಪಿಸಿದ್ದ ಬೆನ್ನಲೇ ದಕ್ಷಿಣ ವಲಯದ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ಅವರು ಶನಿವಾರ ರಾತ್ರಿ ಠಾಣೆಗೆ ಭೇಟಿ ಸ್ಥಳದಲ್ಲೇ ಅಮಾನತಿಗೆ ಆದೇಶಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು. ರಾಬಿನ್ ಡಿಸೋಜಾ ಎಂಬುವರು ತಮ್ಮ ಸಹೋದರ ರಾಯ್ ಡಿಸೋಜಾ ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂದು ಎಸ್‌ಪಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ, ಠಾಣೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಸಿದ ವಿರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಅವರು ಎಸ್‌ಪಿಗೆ ನೀಡಿದ ವರದಿಯ ಆಧರಿಸಿ 8 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಘಟನೆ ವಿವರ: ರಾಯ್ ಅವರು ಜೂನ್‌ 9ರ ಮಧ್ಯರಾತ್ರಿ ಕತ್ತಿ ಹಿಡಿದುಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸರು ತಡೆದಿದ್ದಾರೆ. ಆಗ ರಾಯ್, ಪೊಲೀಸರ ಮೇಲೆ ಕತ್ತಿ ಬೀಸಿದ್ದಾರೆ ಎನ್ನಲಾಗಿದೆ. ಇದರಿಂದ ಸಿಬ್ಬಂದಿಯೊಬ್ಬರ ಕೈಗೆ ಗಾಯವಾಗಿತ್ತು. ನಂತರ, ಪೊಲೀಸರು ಅವರನ್ನು ಪೊಲೀಸ್ ಠಾಣೆಗೆ ಕರೆತಂದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಂದು ರಾತ್ರಿಯೇ ಅವರ ತಾಯಿಯನ್ನು ಠಾಣೆಗೆ ಕರೆಯಿಸಿ, ಹಲ್ಲೆಯಿಂದ ಗಾಯಗೊಂಡಿದ್ದ ಅವರನ್ನು ಕಳುಹಿ ಸಿದ್ದರು. ರಾಯ್ ಅವರು ಮಾನಸಿಕ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ.  

ಬಳಿಕ ರಾಯ್ ಕುಟುಂಬದವರು ಪಟ್ಟಣದಲ್ಲಿನ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಶುಕ್ರವಾರ ಕರೆದೊಯ್ದಿದ್ದರು. ಹಲ್ಲೆಯಿಂದ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ರಾಯ್ ಡಿಸೋಜಾ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದರು.

ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಬೇಬಿ ಮಾಥ್ಯೂ ಹಾಗೂ ಕ್ಯಾಥೋಲಿಕ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಜಾನ್ಸನ್‌ ಪಿಂಟೋ ಘಟನೆ ಖಂಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ‘ಆತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಪೊಲೀಸರು ಮನಬಂದಂತೆ ಹಲ್ಲೆ ನಡೆಸಿರುವುದು ಸರಿಯಲ್ಲ. ನಾವು ಯಾವ ಸಮಾಜದಲ್ಲಿದ್ದೇವೆ’ ಎಂದು ಪ್ರಶ್ನಿಸಿದ್ದರು.

ಇದಕ್ಕೂ ಮೊದಲು ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕರ್ತವ್ಯದ ವೇಳೆ, ಹಲ್ಲೆ ನಡೆಸಿದ್ದಾನೆಂದು ವಿರಾಜಪೇಟೆ ನಗರ ಠಾಣೆಯ ಕಾನ್‌ಸ್ಟೆಬಲ್‌ ಸಂಗಮೇಶ್‌ ದೂರು ನೀಡಿದ್ದರು.  

ಘಟನೆಗೆ ವ್ಯಾಪಕ ಖಂಡನೆ: ಪ್ರಜ್ಞಾವಂತರ ಜಿಲ್ಲೆಯಾಗಿರುವ ಕೊಡಗಿನಲ್ಲಿ ಬೇರೆ ರಾಜ್ಯಗಳ ಮಾದರಿಯ ಘಟನೆ ನಡೆದಿರುವುದು ಅತ್ಯಂತ ವಿಷಾದಕರ. ಪೊಲೀಸರಿಂದಲೇ ಈ ಕೃತ್ಯ ನಡೆದಿದ್ದರೆ ಕ್ಷಮಿಸಲು ಸಾಧ್ಯವೇ ಇಲ್ಲ. ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಕಾಂಗ್ರೆಸ್‌ ಮಡಿಕೇರಿ ಬ್ಲಾಕ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಭಾಷಾ ಆಗ್ರಹಿಸಿದ್ದಾರೆ.

‘ಮೃತರ ತಾಯಿಗೆ ಸರ್ಕಾರ ಪರಿಹಾರ ಧನ ಘೋಷಿಸಬೇಕು’ ಎಂದು ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಸಾಕ್ ಖಾನ್ ಒತ್ತಾಯಿಸಿದ್ದಾರೆ. ಘಟನೆ ಖಂಡಿಸಿ, ಅಲ್ಪಸಂಖ್ಯಾತರ ಸಮುದಾಯದ ಮುಖಂಡರು,ಎಸ್‌ಪಿ ಕ್ಷಮಾ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು. 

ವಿರಾಜಪೇಟೆ ನಾಗರಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ: ಲಿಖಿತ ದೂರನ್ನು ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಅವರು ವಿರಾಜ್‌ಪೇಟೆ ಡಿವೈ ಎಸ್‌ಪಿ ಜಯಕುಮಾರ್ ಅವರಿಗೆ ಹಸ್ತಾಂತರಿಸಿದರು. ವಿರಾಜ್‌ಪೇಟೆ ಪಿಎಸ್‌ಐ ಜಗದೀಶ್ ಸೇರಿದಂತೆ 8 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನಿವಾಸಿಗಳು ಒತ್ತಾಯಿಸಿದರು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!