ಉಡುಪಿ ಶಾಸಕರಿಂದಲೇ ಕೋವಿಡ್ ನಿಯಮ ಉಲ್ಲಂಘನೆ- ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಉಡುಪಿ, ಜೂ.12(ಉಡುಪಿ ಟೈಮ್ಸ್ ವರದಿ): ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಜನತೆಯಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಬೇಕಾದ ಶಾಸಕ ರಘುಪತಿ ಭಟ್ ಅವರ ಕಾರ್ಯಕ್ರಮವೊಂದರಲ್ಲಿಯೇ ಕೋವಿಡ್ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. 

ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಹಮ್ಮಿಕೊಳ್ಳುತ್ತಿರುವ ಹಡಿಲು ಭೂಮಿ ಕೃಷಿ ಆಂದೋಲನದ ಭಾಗವಾಗಿ ಇಂದು ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಪಡುತೋನ್ಸೆಯಲ್ಲಿ 15 ಎಕರೆ ಹಡಿಲು ಕೃಷಿ ಭೂಮಿಯ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜನಸ್ತೋಮದ ಮಧ್ಯೆ ಸೋದೆ ಮಠದ ವಿಶ್ವವಲ್ಲಭ ಶ್ರೀ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಅವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಕೋಣಗಳಿಗೆ ಪೂಜೆ ಮಾಡಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

ಬಳಿಕ ಇವರೆಲ್ಲರು ಸ್ಥಳೀಯರೊಂದಿಗೆ ಗದ್ದೆಗಳಿದು ನೇಜಿ ನೆಟ್ಟರು. ಇದೀಗ ಈ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಮಂದಿ ಯಾವುದೇ ಸುರಕ್ಷಿತ ಅಂತರ ಇಲ್ಲದೇ ಒಟ್ಟಾಗಿ ಸೇರಿರುವುದು ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ  ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ದೂರುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಈ ಕಾರ್ಯಕ್ರಮದ  ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಹಿಂದೆ ಜೂ.5ರಂದು ಕಡೆಕಾರು ಗ್ರಾಪಂ ವ್ಯಾಪ್ತಿಯ ಕುತ್ಪಾಡಿ ಸಸಿತೋಟ ಎಂಬಲ್ಲಿ ,ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 2000 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ನಂತರ ಜೂ.9 ರಂದು ಅಂಬಲಪಾಡಿಯಲ್ಲಿ ಕೂಡ ಇದೇ ರೀತಿ ನೂರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗಿತ್ತು. ಜೂ.11ರಂದು ಕಡೆಕಾರ್ ಗ್ರಾಪಂ ವ್ಯಾಪ್ತಿಯ ಆಯುರ್ವೇದಿಕ್ ಆಸ್ಪತ್ರೆಯ ಹಿಂಬದಿ ಬಳಿ ನಡೆದ ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೇ ಚಾಲನೆ ನೀಡಿದ್ದರು.

ಇದೀಗ ಜನಸ್ತೋಮ ಸೇರುವ ಇಂತಹ ಕಾರ್ಯಕ್ರಮದಲ್ಲಿ ಉನ್ನತಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂ. ಸಿಇಓಗಳೇ ಭಾಗವಹಿಸುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೊರೋನಾ ಹತೋಟಿಗೆ ಬರುತ್ತಿರುವ ಇಂತಹ ಸಂದರ್ಭದಲ್ಲಿ ಈ ರೀತಿ ನೂರಾರು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯವಾಗಿ ಕೊರೋನಾ ಸೋಂಕು ಹರಡುವ ಭೀತಿ ಕೂಡ ಎದುರಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಈ ಬಗ್ಗೆ ‘ಶಾಸಕರ ಜೊತೆ ಮಾತನಾಡಿದ್ದೇನೆ. ಹಡಿಲು ಕೃಷಿಭೂಮಿಗೆ ಚಾಲನೆ ನೀಡುವಾಗ ಜನ ಸೇರಿಸಿ, ಕಾರ್ಯಕ್ರಮ ಮಾಡಲು ಅವಕಾಶ ಮಾಡಿ ಕೊಡಬೇಡಿ. ಲಾಕ್ ಡೌನ್ ಸಮಯ ದಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೊರೋನಾ ಮಾರ್ಗಸೂಚಿ ಅನುಸರಿಸಿ ಕೃಷಿ ಚಟುವಟಿಕೆ ಮಾಡಲು ಶಾಸಕರ ಜೊತೆ ಸಮಾಲೋಚನೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!