ಸಂಬಳ ಕಡಿತ- ಜೀವನ ನಡೆಸಲು ಕಷ್ಟ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ
ಚಿಕ್ಕಬಳ್ಳಾಪುರ ಜೂ.12: ಸಂಬಳ ಕಡಿಮೆಯಾಗಿದ್ದರಿಂದ ಜೀವನ ನಡೆಸಲು ಕಷ್ಟವಾಗಿದೆ ಎಂದು ಡೆತ್‍ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ನಡೆದಿದೆ.
ದಾವಣಗೆರೆಯ ಮೂಲದ ಶಿವರಾಜ್(28) ಆತ್ಮಹತ್ಯೆಗೆ ಶರಣಾದ ಯುವಕ. ಈತ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಡೆತ್ ನೋಟ್ನಲ್ಲಿ ಸಾಯುತ್ತಿರುವುದಕ್ಕೆ ಮನೆಯವರೆಲ್ಲರ ಬಳಿ ಕ್ಷಮೆ ಕೇಳಿದ್ದಾನೆ ಹಾಗೂ ತನಗೆ ಸಂಬಳ ಕೇವಲ 18,000 ರೂ.ಗಳಾಗಿದ್ದು ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ. ಜೊತೆಗೆ ಕಂಪನಿಯ ವೆಂಕಟರಾಮು, ಬಾಲು ಮತ್ತು ರಾಮು ಎಂಬುವರು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆಯೂ ಬರೆದಿದ್ದಾನೆ ಎನ್ನಲಾಗಿದೆ.
ಇದರ ಜೊತೆಗೆ ತನ್ನ ಕುಟುಂಬ ಬಗ್ಗೆ ಬರೆದಿರುವ ಯುವಕ,ಕಂಪನಿಯಲ್ಲಿ ಸಿಗುವ ಇನ್ಸೂರೆನ್ಸ್ ಹಣವನ್ನು ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದುಪತ್ರದಲ್ಲಿ ಬರೆದಿದ್ದಾನೆ. ಈ ಬಗ್ಗೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.