ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆ ಮಾಡಲು ಸಾಧ್ಯವಿಲ್ಲ- ಬಿಆರ್’ಎಸ್ ಆಸ್ಪತ್ರೆಯಿಂದ ಸರಕಾರಕ್ಕೆ ಪತ್ರ
ಉಡುಪಿ ಜೂ.11(ಉಡುಪಿ ಟೈಮ್ಸ್ ವರದಿ): ಪ್ರಮೋದ್ ಮಧ್ವರಾಜ್ ಅವರಿಗೆ ಜ್ಞಾನದ ಕೊರತೆ ಇದೆ. ನಿಯಮದ ಪ್ರಕಾರ ಯಾವುದೇ ಖಾಸಗಿ ಅಥವಾ ಸರಕಾರಿ ಕಟ್ಟಡ ನಿರ್ಮಾಣ ಮಾಡುವಾಗ ಎರಡು ತಳ ಮಹಡಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಆದರೆ ಬಿಆರ್ ಎಸ್ ಸಂಸ್ಥೆಯವರು ಯಾವುದೇ ಅನುಮತಿ ಪಡೆಯದೇ ಮೂರು ತಳಮಹಡಿಯನ್ನು ನಿಯಮ ಬಾಹಿರವಾಗಿ ರಚಿಸಿದ ಪರಿಣಾಮವೇ 400 ಹಾಸಿಗೆಯ ಕಟ್ಟಡ ನಿರ್ಮಿಸಲು ತಡೆ ನೀಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಬಿ ಆರ್ ಶೆಟ್ಟಿಯವರ ಸಂಸ್ಥೆ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆ ಮಾಡಲು ಸಾಧ್ಯವಾಗಲ್ಲ ಎಂದು ಇಂದು ಸರಕಾರಕ್ಕೆ ಪತ್ರ ಬರೆದಿದ್ದು ಈ ಬಗ್ಗೆ ಗುರುವಾರ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು.
ಈ ಬಗ್ಗೆ ಇಂದು ಮಾಹಿತಿ ನೀಡಿದ ಅವರು, ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಿ ಆರ್ ಶೆಟ್ಟಿಯವರ ಚಾರಿಟಿಯ ಮೂಲಕ ಉಚಿತವಾಗಿ ನಡೆಸುತ್ತೇವೆ ಎಂಬುದನ್ನು ಅವರೇ ಒಪ್ಪೊಕೊಂಡಿದ್ದಾರೆ. ಆದ್ದರಿಂದ ಅವರು ಅದನ್ನು ನಡೆಸಿಕೊಂಡು ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು.
ಕುರಿತಂತೆ ಮುಂದಿನ 10 ದಿನಗಳಲ್ಲಿ ಆರೋಗ್ಯ ಸಚಿವರ ನೇತ್ರತ್ವದಲ್ಲಿ ಸಭೆ ಕರೆದು ಆಸ್ಪತ್ರೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಅವರು ತಿಳಿಸಿದ್ದಾರೆ.
ಈ ಆಸ್ಪತ್ರೆಯ ನಿರ್ವಹಣೆ ಗೆ ಸಂಬಂಧಿಸಿದಂತೆ ಈ ಹಿಂದೆಯೇ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಂತೆ ಯುನಿಟ್ ಗಳನ್ನು ರಚಿಸಿ ಒಂದು ಯುನಿಟ್ ಸರಕಾರ ನಡೆಸಿದರೆ, ಉಳಿದ ಎರಡು ಯುನಿಟ್ ನ್ನು ಬಿ ಆರ್ ಶೆಟ್ಟಿ ಅವರು ನಡೆಸಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ಈ ಹಿಂದೆ ನಾನು ಮಾಜಿ ಶಾಸಕನಾಗಿದ್ದಾಗ ಆಸ್ಪತ್ರೆ ನಿರ್ವಹಣೆ ಕುರಿತು ಶಾಶ್ವತ ಒಪ್ಪಂದ ಮಾಡುವಂತೆಯೂ ಸಲಹೆ ನೀಡಿದ್ದೆ. ಆದರೆ ಇದ್ಯಾವುದೂ ನಡೆದಿಲ್ಲ ಇದರಿಂದ ಇಂದು ಆಸ್ಪತ್ರೆಯ ನಿರ್ವಹಣೆಗೆ ತೊಡಕುಂಟಾಗಿದೆ ಎಂದರು. ಇನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ನಿರ್ಮಾಣಗೊಳ್ಳುತ್ತಿರುವ 400 ಬೆಡ್ ಗಳ ಖಾಸಗಿ ಆಸ್ಪತ್ರೆಯ ನಿರ್ಮಾಣಕ್ಕೆ ಶಾಸಕರು ತಡೆ ನೀಡಿದ್ದಾರೆ ಎಂಬ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರಮೋದ್ ಮಧ್ವರಾಜ್ ಅವರಿಗೆ ಜ್ಞಾನದ ಕೊರತೆ ಇದೆ ಎನಿಸುತ್ತಿದೆ. ಝಡ್ ಆರ್ ಆರ್ ನಿಯಮದ ಪ್ರಕಾರ ಯಾವುದೇ ಖಾಸಗಿ ಅಥವಾ ಸರಕಾರಿ ಕಟ್ಟಡ ನಿರ್ಮಾಣ ಮಾಡುವಾಗ ಬೇಸ್ಮೆಂಟ್ 2 ರವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಆದರೆ ಬಿಆರ್ ಎಸ್ ಸಂಸ್ಥೆಯವರು ಯಾವುದೇ ಅನುಮತಿ ಪಡೆಯದೇ ಬೇಸ್ ಮೆಂಟ್ 3 ನ್ನು ನಿಯಮ ಬಾಹಿರವಾಗಿ ರಚಿಸಿದ ಪರಿಣಾಮವೇ ಹೀಗೆ ಆಗಿದೆ. ಈ ಬಗ್ಗೆ ಮೊದಲೇ ತಿಳಿಸಲಾಗಿದೆ. 2 ಬೇಸ್ಮೆಂಟ್ ನ ಕಟ್ಟ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ಆದರೆ ಬಿಆರ್ ಎಸ್ ಸಂಸ್ಥೆ ನಗರಸಭೆ ಅನುಮತಿ ಪಡೆಯದೇ ನಿಯಮ ಬಾಹಿರವಾಗಿ 3 ಬೇಸ್ಮೆಂಟ್ ನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ ಇದಕ್ಕೆ ಸರಕಾರ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದರು.