ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್: ಬೆಲೆ ಏರಿಕೆ ವಿರುದ್ಧ ಸೌಟು, ಲಟ್ಟನಿಗೆ, ಬಟ್ಟಲು ಹಿಡಿದು ಪ್ರತಿಭಟನೆ
ಉಡುಪಿ: ಕೊರೋನಾ ಮಹಾಮಾರಿಯಿಂದಾಗಿ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿ ಬಡ ಹಾಗೂ ಮಧ್ಯಮ ವರ್ಗದ ಜನರು ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವ ಈ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ನಿರಂತರವಾಗಿ ಏರಿಸುತ್ತಾ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.
ಕಚ್ಚಾ ತೈಲಗಳ ಬೆಲೆಯನ್ನು ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಬಂಕ್ ಎದುರುಗಡೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಲಟ್ಟನಿಗೆ, ಸೌಟು ಹಿಡಿದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಯಿತು.
35 ರೂಪಾಯಿ ಬೆಲೆಯ ಪೆಟ್ರೋಲ್ ಗೆ 65 ರೂ ತೆರಿಗೆ ವಿಧಿಸುವ ಮೂಲಕ ಜನರನ್ನು ದೋಚುತ್ತಿರುವ ಈ ಸರ್ಕಾರವು ಅಧಿಕಾರಕ್ಕೆ ಬಂದಂದಿನಿಂದ ಪ್ರತೀಯೊಂದು ವಸ್ತುಗಳ ಬೆಲೆಗಳು ದಿನೇ ದಿನೇ ಹೆಚ್ಚಾಗುತ್ತಿವೆ.ಎಂದವರು ಹೇಳಿದರು.
ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ ಮಾತನಾಡುತ್ತಾ “ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಗ್ಯಾಸ್ ಸಿಲಿಂಡರ್ ಬೆಲೆ 350-400ರೂ.ಗಳಿದ್ದಾಗ ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಮುಂತಾದವರು ನಡುರಸ್ತೆಯಲ್ಲಿ ಹೊರಳಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ಅವರ ಸರಕಾರವು ಗ್ಯಾಸ್ ಸಿಲಿಂಡರ್ ಬೆಲೆಯನ್ನು ದ್ವಿಗುಣ ಗೊಳಿಸಿದರೂ ಬಿಜೆಪಿಯ ಯಾವೊಬ್ಬ ನಾಯಕರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಯಾಕೆಂದರೆ ಅವರಿಗೆ ಮತದಾರರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟ ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಕೆಪಿಸಿಸಿ ಸಂಯೋಜಕಿ ಡಾ.ಸುನೀತಾ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಮಹಿಳಾ ಕಾಂಗ್ರೆಸ್ ಜತೆ ಕಾರ್ಯದರ್ಶಿ ಜಯಶ್ರೀ ಶೇಟ್, ಶೈಲಾ ಮುಂತಾದವರು ಭಾಗವಹಿಸಿದ್ದರು. ಎಲ್ಲಾ ಮಹಿಳೆಯರು ಕೈಯಲ್ಲಿ ಸೌಟು, ಲಟ್ಟನಿಗೆ,ಬಟ್ಟಲು ಹಿಡಿದು ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದರು.