ಭಟ್ಕಳ: 6 ವರ್ಷದಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯ ಬಂಧನ

ಕಾರವಾರ: 2015ರಿಂದ ಅಕ್ರಮವಾಗಿ ಕರ್ನಾಟಕದಲ್ಲಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಮಹಿಳೆಯನ್ನು ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಜಾವೀದ್ ಮೋಹಿದ್ದಿನ್ ರುಕ್ಸುದ್ದೀನ್(32 ವರ್ಷ)ಎಂದು ಗುರುತಿಸಲಾಗಿದೆ.

ಪಾಕಿಸ್ತಾನದ ನಾಗರೀಕತ್ವ ಹೊಂದಿರುವ ಈಕೆ, ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ  ಕಳೆದ ಕೆಲ ವರ್ಷಗಳ ಹಿಂದೆಯೇ ಆಗಮಿಸಿ ವಾಸವಾಗಿದ್ದಳು. ಭಟ್ಕಳದ ನವಾಯತ್ ಕಾಲೋನಿಯ ಜಾವೀದ್ ಮೊಹಿದ್ದೀನ್ ರುಕ್ಕುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿ, 2014ರಲ್ಲಿ 3 ತಿಂಗಳು ವಿಸಿಟಿಂಗ್ ವೀಸಾದ  ಮೇಲೆ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಪುನಃ 2016ರ ಪ್ರಾರಂಭದಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ಭಟ್ಕಳದ ನವಾಯತ ಕಾಲೋನಿಯಲ್ಲಿ ವಾಸವಾಗಿದ್ದಳು. ಮಹಿಳೆಗೆ ಮೂರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ದಾಖಲೆ ನೀಡಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪಡೆದಿದ್ದ ಮಹಿಳೆ
ಇನ್ನು ಬಂಧಿತ ಮಹಿಳೆ ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಳು. ದಾಳಿ ವೇಳೆ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಸದ್ಯ ಈಕೆಯ ವಿರುದ್ಧ ವಿದೇಶಿ  ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಮಹಿಳೆಗೆ ನ್ಯಾಯಾಂಗ ಬಂಧನ
ಬಂಧಿತ ಮಹಿಳೆಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬೆಳ್ಳಿಯಪ್ಪ,  ಕೆ.ಯು. ಸಿಪಿಐ ದಿವಾಕರ ಪಿ.ಎಮ್, ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕುಸುಮಾ ಬಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!