ಶೇ.60ಕ್ಕಿಂತಲೂ ಕಡಿಮೆ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರ ತೀವ್ರ ಕಳವಳ

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿಹೋಗಿರುವ ಭಾರತದಲ್ಲಿ ಶೇ.60ಕ್ಕಿಂತಲೂ ಕಡಿಮೆ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹಾಕಲಾಗಿದ್ದು, ಇದು ಕೇಂದ್ರ ಸರ್ಕಾರದ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಕಳೆದ ಜನವರಿಯಲ್ಲೇ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಅಂದರೆ ಸುಮಾರು 5 ತಿಂಗಳ ಅವಧಿಯಲ್ಲಿ ದೇಶದಲ್ಲಿನ ಒಟ್ಟಾರೆ ಆರೋಗ್ಯ ಕಾರ್ಯರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಪೈಕಿ ಕೇವಲ ಶೇ.60ಕ್ಕಿಂತ ಕಡಿಮೆ ಪ್ರಮಾಣದ ಮಂದಿ ಪೂರ್ಣ ಪ್ರಮಾಣದಲ್ಲಿ  ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಸುಮಾರು 1 ಕೋಟಿಗೂ ಹೆಚ್ಚಿದ್ದು, ಸೋಂಕಿತರಿಗೆ ಹೆಚ್ಚಾಗಿ ಅವರು ಸಂಪರ್ಕಕ್ಕೆ ಬರುವುದರಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ಸಾಂಕ್ರಾಮಿಕ ಕಾಯಿಲೆಗೆ ಗುರಿಯಾಗುತ್ತಾರೆ.

ಕೋವಿಡ್ ವಿರುದ್ಧ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು  ಮೂಂಚೂಣಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದ್ದು, ಸಾಂಕ್ರಾಮಿಕದ ವಿರುದ್ಧದ ಮುಂದಿನ ಹಂತದ ಹೋರಾಟಕ್ಕೆ ಅವರ ನೆರವು ಅತ್ಯಗತ್ಯ. ಹೀಗಾಗಿ ಅವರು ಸಂಪೂರ್ಣ ಪ್ರಮಾಣದ ಲಸಿಕೆ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ನೀಡಲು ಸಾಧ್ಯವಾಗಿಲ್ಲ.  ಇದು ದೇಶದ ಕೊರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಹಿನ್ನಡೆಯನ್ನುಂಟು ಮಾಡುವ ಆತಂಕವಿದೆ ಎಂದು ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕುರಿತ ಪರಿಶೀಲನಾ ಸಭೆ ನಡೆಸಿ ಲಸಿಕೆ ದತ್ತಾಂಶದ ಮಾಹಿತಿ ನೀಡಿತು. ಈ ವೇಳೆ ಶೇ.82ರಷ್ಟು ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದು, ಶೇ.56ರಷ್ಟು ಆರೋಗ್ಯ ಕಾರ್ಯಕರ್ತರು ಮತ್ತು  ಮುಂಚೂಣಿ ಕಾರ್ಯಕರ್ತರು ಮಾತ್ರ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು, ದೆಹಲಿ ಮತ್ತು ಅಸ್ಸಾಂ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಆರೋಗ್ಯ ಕಾರ್ಯಕರ್ತರಲ್ಲಿ ಸಂಪೂರ್ಣ  ವ್ಯಾಕ್ಸಿನೇಷನ್ ಪಡೆದವರ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ.

ಸಚಿವಾಲಯ ನೀಡಿರುವ ದತ್ತಾಂಶಗಳ ಪ್ರಕಾರ ಸುಮಾರು 2 ಕೋಟಿಯಷ್ಟಿರುವ ಮುಂಚೂಣಿ ಕಾರ್ಯಕರ್ತರಲ್ಲಿ ಶೇ.85ರಷ್ಟು ಮಂದಿ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೆ, ಶೇ.47ರಷ್ಟು ಮಂದಿ ಮಾತ್ರ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದಕ್ಕಿಂತ  ಕಡಿಮೆ ಅಂಕಿ-ಸಂಖ್ಯೆಗಳನ್ನು ವರದಿ ಮಾಡಿದ್ದು, ಅವುಗಳಲ್ಲಿ ಬಿಹಾರ, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ, ಕರ್ನಾಟಕ, ಮತ್ತು ಪಂಜಾಬ್ ರಾಜ್ಯಗಳು ಕೂಡ ಸೇರಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

‘ಸಾಂಕ್ರಾಮಿಕ ರೋಗಗಳಿಗೆ ಆರೋಗ್ಯ ರಕ್ಷಣೆಯ ಪ್ರತಿಕ್ರಿಯೆಯನ್ನು ರಕ್ಷಿಸಲು ಈ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಗುಂಪುಗಳಿಗೆ ಸಂಪೂರ್ಣ ಪ್ರಮಾಣದ ಲಸಿಕೆ ನೀಡಿಕೆ ಬಹುಮುಖ್ಯವಾಗಿದೆ. ಹೀಗಾಗಿ ಎರಡನೇ ಡೋಸ್ ಲಸಿಕೆ ನೀಡಿಕೆಯನ್ನು ತ್ವರಿತಗೊಳಿಸಲು ಪರಿಣಾಮಕಾರಿ  ಯೋಜನೆಗಳನ್ನು ಸಿದ್ಧಪಡಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಸೆಷನ್ ಮತ್ತು ಸ್ಲಾಟ್ ಗಳನ್ನು ಮೀಸಲಿಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. 

ಖಾಸಗಿ ವಲಯದ ನಿರಾಸಕ್ತಿ
ಇನ್ನು ಹಾಲಿ ಲಸಿಕಾ ಕಾರ್ಯಕ್ರಮದಲ್ಲಿನ ಹಿನ್ನಡೆ ಖಾಸಗಿ ವಲಯದ ನಿರಾಸಕ್ತಿ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ಖಾಸಗಿ ವಲಯ ಲಸಿಕೀಕರಣದಲ್ಲಿ ನಿರೀಕ್ಷಿಸಿದಷ್ಟು ಕಾರ್ಯಪ್ರವೃತ್ತವಾಗಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕೆ ಸರ್ಕಾರ ನೂತನ ಲಸಿಕೆ ನೀತಿ ಪ್ರಕಟಿಸಿದ್ದು, ಇದರಲ್ಲಿ  ಶೇ.25ರಷ್ಟು ಲಸಿಕೆ ದಾಸ್ತಾನುಗಳನ್ನು ಖಾಸಗಿ ಆಸ್ಪತ್ರೆಗಳು ಸಂಗ್ರಹಿಸಬಹುದು ಎಂದು ಹೇಳಿದೆ. ಆದರೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ, ಲಸಿಕೀಕರಣಕ್ಕೆ ಖಾಸಗೀ ವಲಯದಿಂದ ನಿರೀಕ್ಷಿತ ಪ್ರತಿಕ್ರಿಯ ದೊರೆತಿಲ್ಲ ಎಂದು  ಹೇಳಲಾಗಿದೆ.

ಕೋವಿನ್ ಹೊಸ ಪೋರ್ಟಲ್ ನ ಕುರಿತು ರಾಜ್ಯಗಳಿಗೆ ಮಾಹಿತಿ
ಇದೇ ವೇಳೆ ಸಭೆಯಲ್ಲಿ ಹೊಸ ವ್ಯಾಕ್ಸಿನೇಷನ್ ಮಾರ್ಗಸೂಚಿಗಳ ಅಡಿಯಲ್ಲಿ ಸಂಯೋಜಿಸಲ್ಪಟ್ಟ ಕೋವಿನ್ ಪೋರ್ಟಲ್ನಲ್ಲಿನ ಹೊಸ ವೈಶಿಷ್ಟ್ಯಗಳ ಬಗ್ಗೆ ರಾಜ್ಯಗಳಿಗೆ ಮಾಹಿತಿ ನೀಡಲಾಯಿತು. ಅಂತೆಯೇ ಲಸಿಕೆ ಪ್ರಮಾಣ ಪತ್ರದಲ್ಲಿನ ಹೆಸರು, ಹುಟ್ಟಿದ ವರ್ಷ, ಲಿಂಗ ಮತ್ತು ಫೋಟೋ ಐಡಿ ಸಂಖ್ಯೆಯಂತಹ  ವೈಯಕ್ತಿಕ ಮಾಹಿತಿಗಳಲ್ಲಿ ತಿದ್ದುಪಡಿಗಳನ್ನು ಮಾಡಬಹುದು. ನೂತನ ಪೋರ್ಟಲ್ ನಲ್ಲಿ ಅಸ್ತಿತ್ವದಲ್ಲಿರುವ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳನ್ನು ನಗರ ಮತ್ತು ಗ್ರಾಮೀಣ ಎಂದು ಟ್ಯಾಗ್ ಮಾಡುವ ವೈಶಿಷ್ಟ್ಯವನ್ನು ಸಹ ಒದಗಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ ವ್ಯಾಕ್ಸಿನೇಷನ್ ದಿನಾಂಕ,  ವ್ಯಾಕ್ಸಿನೇಷನ್ ಸೆಷನ್ ಗಳನ್ನು ತಿದ್ದುಪಡಿ ಮಾಡಲು ಅವಕಾಶವಿಲ್ಲ. ಇದಕ್ಕಾಗಿ ಬಳಕೆದಾರರು ಜಿಲ್ಲಾ ರೋಗನಿರೋಧಕ ಅಧಿಕಾರಿಗಳ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ

Leave a Reply

Your email address will not be published. Required fields are marked *

error: Content is protected !!