| ಉದ್ಯಾವರ (ಉಡುಪಿ ಟೈಮ್ಸ್ ವರದಿ): ಕಳೆದ ಆರು ತಿಂಗಳಿನಿಂದ ಉದ್ಯಾವರದಲ್ಲಿ ಕಾಯಂ ಪಿಡಿಒ ನೇಮಿಸುವ ಬಗ್ಗೆ ವಿವಿಧ ರೀತಿಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ, ಪ್ರಸ್ತುತ ಇರುವ ಪ್ರಭಾರಿ ಪಿಡಿಒರನ್ನು ಬದಲಿಸಿ ಇನ್ನೊಬ್ಬ ಪ್ರಭಾರಿಯನ್ನೇ ನೇಮಿಸಿದ ಬಗ್ಗೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಚ್ಚರಿ ವ್ಯಕ್ತಪಡಿಸಿದೆ.
ಪ್ರಸ್ತುತ ಅಂಬಲ್ಪಾಡಿ ಪಿಡಿಒರವರು ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನಸಾಮಾನ್ಯರ ಕೆಲಸಗಳಿಗೆ ತೊಂದರೆ ಯಾಗುತ್ತಿದ್ದು, ಈಗ ಹೊಸದಾಗಿ 80 ಬಡಗಬೆಟ್ಟು ಪಿಡಿಓರನ್ನು ಪ್ರಭಾರಿಯಾಗಿ ನೇಮಿಸಲಾಗಿದ್ದು, ಜನಸಾಮಾನ್ಯರ ಕೆಲಸಗಳು ಇನ್ನಷ್ಟು ವಿಳಂಬವಾಗಲಿವೆ. ದ್ವಿತೀಯ ಬಾರಿಗೆ ಪ್ರಭಾರಿಯನ್ನೇ ನೇಮಿಸಿದ್ದ ಹಿಂದೆ ಶಾಸಕರ ಅಥವಾ ಮೇಲಾಧಿಕಾರಿಗಳ ಅಥವಾ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರ ಒತ್ತಡವಿರಬಹುದೇ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಸಂದೇಹ ವ್ಯಕ್ತಪಡಿಸಿದ್ದಾರೆ.
ಇಡೀ ದೇಶವೇ ಸಾಂಕ್ರಾಮಿಕ ರೋಗದಲ್ಲಿ ಮುಳುಗಿರುವಾಗ ಬಿಜೆಪಿ ಮಾತ್ರ ಅಧಿಕಾರಿಗಳ ವರ್ಗಾವಣೆಯ ದಂಧೆ ಮಾಡುತ್ತಿರುವುದು ಖಂಡನೀಯ. ಶಾಸಕರು ಈ ಬಗ್ಗೆ ಅಸಡ್ಡೆ ವರ್ತನೆಯನ್ನು ಬಿಟ್ಟು ಶೀಘ್ರವಾಗಿ ಖಾಯಂ ಪಿಡಿಒ ನೇಮಿಸಲಿ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. | |