ಶಾಸಕ ರಘುಪತಿ ಭಟ್ ತಡೆಯಿಂದ ಸುಸಜ್ಜಿತ ಆಸ್ಪತ್ರೆ ಇಂದು ಅವ್ಯವಸ್ಥೆಯತ್ತ ಸಾಗುತ್ತಿದೆ: ಪ್ರಮೋದ್ ಮಧ್ವರಾಜ್

ಉಡುಪಿ: ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲೆಯಾದ್ಯಂತ ಬರುವ ಗರ್ಭಿಣಿಯರಿಗೆ ಮತ್ತು ಮಕ್ಕಳ ಚಿಕಿತ್ಸೆಗೆ ಹಳೇಯ ಸರಕಾರಿ ಕಟ್ಟಡದ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯತೆಯನ್ನು ಮತ್ತು ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಮನವಿಯನ್ನು ಪ್ರಮೋದ್ ಮಧ್ವರಾಜ್ ರವರು ಸರಕಾರದ ಮುಂದಿಟ್ಟಾಗ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಉದ್ಯಮಿ ಡಾ.ಬಿ.ಆರ್. ಶೆಟ್ಟಿಯವರು ಮುಂದೆ ಬಂದು ಉಡುಪಿಯಲ್ಲಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಆಸ್ಪತ್ರೆ ನಿರ್ಮಿಸಿ ನಿರ್ವಹಿಸುತ್ತಿದ್ದರು.

ಈ ಆಸ್ಪತ್ರೆ ನಿರ್ಮಾಣಗೊಂಡ ಬಳಿಕ ಹತ್ತು ಸಾವಿರಕ್ಕೂ ಹೆಚ್ಚು ಗರ್ಬಿಣಿಯರು ಸಂತೋಷದಿಂದ ಈ ಆಸ್ಪತ್ರೆಯಲ್ಲಿ ಮಕ್ಕಳನ್ನ ಹೆತ್ತಿದ್ದಾರೆ, ಆಸ್ಪತ್ರೆಯವರೇ ಆಹಾರ ಮತ್ತು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. 400 ಬೆಡ್ ಗಳ ಆಸ್ಪತ್ರೆಯನ್ನು ಕಟ್ಟಿಸಲು ಸರಕಾರಿ ಜಾಗವನ್ನು ಹಲವು ವರ್ಷಗಳಿಗೆ ಗುತ್ತಿಗೆಯಾಧಾರದಲ್ಲಿ ನೀಡಬೇಕು, ಅಲ್ಲಿಂದ ಬರುವ ಆದಾಯದಿಂದ 200 ಬೆಡ್ ಗಳುಳ್ಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಮುಂದುವರಿಸುತ್ತೇವೆ ಎಂದು ಸರಕಾರದೊಂದಿಗೆ ಎಂ.ಓ.ಯು ಮಾಡಿಸಿಕೊಂಡಿತ್ತು. ಹಿಂದಿನ ಸರ್ಕಾರದೊಂದಿಗೆ ಮಾಡಿಕೊಂಡಿರುವ ಕಾನೂನಾತ್ಮಕ ಒಪ್ಪಂದದಂತೆ ಎರಡು ಆಸ್ಪತ್ರೆ ಗಳ ಈ ಯೋಜನೆಯನ್ನು ಡಾ. ಬಿ.ಆರ್ ಶೆಟ್ಟಿಯವರು ಸ್ವಂತ ಲಾಭಕ್ಕಾಗಿ ಮಾಡದೆ 400 ಬೆಡ್ ಗಳ ಸುಸಜ್ಜಿತ ಆಸ್ಪತ್ರೆಯಿಂದ ಬಂದ ಲಾಭಾಂಶವನ್ನು ಸಂಪೂರ್ಣವಾಗಿ ಎರಡೂ ಅಸ್ಪತ್ರೆಗಳ ನಿರ್ವಹಣೆ ಮತ್ತು ಅಭಿವ್ರದ್ದಿಗಾಗಿ ಬಳಸಿಕೊಳ್ಳುವುದಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 

ಸರಕಾರ ಬದಲಾದ ಮೇಲೆ ಹಾಲಿ ಶಾಸಕ ರಘುಪತಿ ಭಟ್ ರವರು 400 ಬೆಡ್ ಗಳ ಆಸ್ಪತ್ರೆಯನ್ನು ಕಟ್ಟಿಸಲು ವಿರೋಧ ತೋರಿದ ಹಿನ್ನಲೆಯಲ್ಲಿ ಮತ್ತು ಸರಕಾರಿ ಅನುದಾನ ಮತ್ತು ಯೋಜನೆಗಳ ಬಿಲ್ ಬಾಕಿ ಪಾವತಿಯಾಗದೇ ಇರುವುದರಿಂದಾಗಿ ಬಿ.ಆರ್ ಶೆಟ್ಟಿ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸಿ ಅದರ ನಿರ್ವಹಣೆಯ ಜವಾಬ್ದಾರಿ ಯಿಂದ ಹಿಂದೆ ಸರಿಯುತ್ತಿರುವುದಾಗಿ ಸರಕಾರಕ್ಕೆ ಪತ್ರ ಬರೆದು ನೋಟಿಸ್ ನೀಡಿದೆ.400 ಬೆಡ್ ಗಳ ಆಸ್ಪತ್ರೆ ನಿರ್ಮಾಣಕ್ಕೆ ಹಿಂದಿನ ಸರಕಾರ ಅನುಮತಿ ನೀಡಿದ್ದರೂ, ಸರಕಾರ ಬದಲಾದ ಮೇಲೆ ಶಾಸಕ ರಘುಪತಿ ಭಟ್ ರವರು ಈ ಆಸ್ಪತ್ರೆ ನಿರ್ಮಾಣಕ್ಕೆ ತಡೆ ಯೊಡ್ಡುತ್ತಾ ಬಂದಿರುವುದರಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಸುಸಜ್ಜಿತ ಆಸ್ಪತ್ರೆ ಇಂದು ಅವ್ಯವಸ್ಥೆಯತ್ತ ಮುಖಮಾಡುತ್ತಿದೆ. 

ಬಹುಷ 400 ಬೆಡ್ ಗಳ ಆಸ್ಪತ್ರೆ ನಿರ್ಮಾಣವಾಗಿರುತ್ತಿದ್ದಲ್ಲಿ  ಕೋವಿಡ್ ನಿರ್ವಹಣೆಯಲ್ಲೂ ಉಡುಪಿ ಜಿಲ್ಲೆಗೆ ಹೆಚ್ಚಿನ ಸಹಕಾರ ವಾಗುತ್ತಿದ್ದಿರಬಹುದು ಮತ್ತು 200 ಬೆಡ್ ಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ಅವರೇ ನೋಡಿಕೊಳ್ಳುತ್ತಿ ದ್ದರು. ಇದೀಗ ರಘುಪತಿ ಭಟ್ ರವರ ವಿರೋಧದಿಂದಾಗಿ ಕರ್ನಾಟಕ ಸರಕಾರ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ  ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಡುಪಿಯಲ್ಲಿ ಗೊಂದಲಗಳುಂಟಾಗಿ  ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಇತರ ನೌಕರರಿಗೆ ಹಲವು ತಿಂಗಳಿನಿಂದ ವೇತನವಿಲ್ಲದೆ ಇತ್ತ ಸೇವಾ ಭದ್ರತೆಯೂ ಇಲ್ಲದೆ ಮಾನಸಿಕವಾಗಿ ಕಿರುಕುಳ ಅನುಭವಿಸಿ ಮುಷ್ಕರದ ಕಾರಣದಿಂದಾಗಿ ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಡುವಂತಾಗಿದೆ. 

ಶಾಸಕ ರಘುಪತಿ ಭಟ್ ರವರಿಂದ ಪ್ರಾರಂಭವಾದ ಈ ಸಮಸ್ಯೆಯನ್ನು ಅವರೇ ಪರಿಹರಿಸಲಿ, ಅಂತರಾಷ್ಟ್ರೀಯ ಮಟ್ಟದ ವ್ಯವಸ್ಥಿತ ಕರ್ನಾಟಕ ಸರಕಾರ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ  ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಡುಪಿ ಹಡಿಲು ಬೀಳ ದಂತೆ ರಕ್ಷಿಸಿ ಜನರಿಗೆ ಈ ಹಿಂದಿನಂತೆಯೆ ಆರೋಗ್ಯ ಸೇವೆ ಮತ್ತು ಅಲ್ಲಿಯ ನೌಕರರಿಗೆ ವೇತನ ಸಹಿತ ಸೇವಾ ಭದ್ರತೆಯ ಜವಾಬ್ದಾರಿ ಯನ್ನು ವಹಿಸಿಕೊಳ್ಳಲಿ ಎಂದು ಪ್ರಮೋದ್ ಮಧ್ವರಾಜ್ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!