ಕಾಪು: ಪೆಟ್ರೋಲ್ ಬಂಕ್ ಮಾಲಕನಿಗೆ 18 ಲಕ್ಷ ರೂ. ವಂಚಿಸಿದ ಮ್ಯಾನೇಜರ್!
ಕಾಪು ಜೂ.10(ಉಡುಪಿ ಟೈಮ್ಸ್ ವರದಿ): ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲಕನಿಗೆ ಲಕ್ಷಾಂತರ ವಂಚಿಸಿರುವ ಘಟನೆ ಮೂಳೂರಿನಲ್ಲಿ ನಡೆದಿದೆ.
ಈ ಬಗ್ಗೆ ಕೆ.ದೀಪಕ್‌ರಾಜ್ ಶೆಟ್ಟಿ ಎಂಬವರು ದೂರು ನೀಡಿದ್ದು. ಅದರಂತೆ ಇವರು ಮೂಳೂರಿನ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಸುಮಾರು 4 ತಿಂಗಳಿಂದ ಸುಖೇಶ್ ಶೆಟ್ಟಿ ಎಂಬಾತ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದನು. ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವನ್ನು ಸುಖೇಶ್ ಶೆಟ್ಟಿ ನೋಡಿಕೊಂಡಿದ್ದು, ಕೆ.ದೀಪಕ್‌ರಾಜ್ ಶೆಟ್ಟಿ ರವರ ಪೆಟ್ರೋಲ್ ಬಂಕ್‌ನ ಹಣವನ್ನು ಕಾರ್ಡ್ ಮೂಲಕ ಮತ್ತು ನಗದು ರೀತಿಯಲ್ಲಿ ಬ್ಯಾಂಕಿಗೆ ಸುಖೇಶ್ ಶೆಟ್ಟಿಯು ಜಮಾ ಮಾಡಿಕೊಂಡು ಬರುತ್ತಿದ್ದನು, ಹೀಗೆ ಜಮಾ ಮಾಡಿದ ಹಣದಲ್ಲಿ ವ್ಯತ್ಯಾಸ ಬಂದಿರುವುದಾಗಿ ಕಂಪನಿಯವರು ಕೆ.ದೀಪಕ್‌ರಾಜ್ ಶೆಟ್ಟಿರವರಿಗೆ ತಿಳಿಸಿದ್ದು, ಈ ಬಗ್ಗೆ ಸುಖೇಶ್ ಬಳಿ ವಿಚಾರಿಸಿದಾಗ ಆತನು ಈ ಬಗ್ಗೆ ಪರಿಶೀಲಿಸಿ ತಿಳಿಸುವುದಾಗಿ ಹೇಳಿ ತನ್ನ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿ ಮೇ.27 ರಂದು ಸಂಜೆ ಪೆಟ್ರೋಲ್ ಬಂಕ್‌ನಿಂದ ತೆರಳಿದ್ದನು.
ಬಳಿಕ ಮೇ.28 ರಂದು ಕೆ. ದೀಪಕ್‌ರಾಜ್ ಶೆಟ್ಟಿರವರು ಪೆಟ್ರೋಲ್ ಬಂಕ್‌ಗೆ ಬಂದು ನೋಡುವಾಗ ಬ್ಯಾಂಕಿನ ಸ್ಟೇಟ್‌ಮೆಂಟ್, ಸೆಲ್ಸ್‌ರಿಪೋರ್ಟ್, ಮತ್ತು ಕಾರ್ಡಿನ ಸ್ಟೇಟ್‌ಮೆಂಟ್‌ಗೆ ಹಾಗೂ ಸೆಲ್ಸ್ ರಿಪೋರ್ಟ್‌ಗೂ ಸುಮಾರು 18,00,000 ರೂ. ವ್ಯತ್ಯಾಸ ಕಂಡು ಬಂದಿರುತ್ತದೆ. ಅಲ್ಲದೆ ಸುಖೇಶನು ಬ್ಯಾಂಕಿಗೆ ಸಂಬಂಧಪಟ್ಟ ಅಕೌಂಟ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಿರುತ್ತಾನೆ. ಈ ಬಗ್ಗೆ ಸುಖೇಶ್ ಶೆಟ್ಟಿಯು ಪೆಟ್ರೋಲ್ ಬಂಕ್‌ನ ಹಣವನ್ನು ಬ್ಯಾಂಕಿಗೆ ಸರಿಯಾಗಿ ಜಮಾ ಮಾಡದೇ ಮೋಸ ಮಾಡಿ ಪೆಟ್ರೋಲ್ ಬಂಕ್‌ನ ವ್ಯವಹಾರದಲ್ಲಿ ಸುಮಾರು 18 ಲಕ್ಷ ರೂಪಾಯಿಗಳು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.