ಕೋವಿಡ್ ಚಿಕಿತ್ಸೆಗೆ ಸರಕಾರ ನಿಗದಿ ಪಡಿಸಿದ ಹಣವನ್ನೇ ಖಾಸಗಿ ಆಸ್ಪತ್ರೆಗಳು ಪಡೆಯಬೇಕು-ಸಚಿವ ಕೋಟ ಎಚ್ಚರಿಕೆ

ಮಂಗಳೂರು, ಜೂ9(ಉಡುಪಿ ಟೈಮ್ಸ್ ವರದಿ)ಕೋವಿಡ್ ಸೋಂಕಿತರ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿರುವ ಮೊತ್ತದ ಶುಲ್ಕವನ್ನು ಮಾತ್ರ ಪಡೆಯಬೇಕು. ಒಂದೊಮ್ಮೆ ಹೆಚ್ಚುವರಿ ಶುಲ್ಕವನ್ನು ಪಡೆದಲ್ಲಿ ಅದನ್ನು ಹಿಂದಿರುಗಿ ಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಿಲ್‍ಗೆ ಸಂಬಂಧಿಸಿದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚಿನ ಚಿಕಿತ್ಸಾ ಶುಲ್ಕವನ್ನು ಪಡೆಯು ತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕರಿಂದ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆಯದಂತೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ನೋಡಲ್ ಅಧಿಕಾರಿಗಳು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಪಡೆದು ಗುಣ ಹೊಂದಿ ಡಿಸ್ಚಾರ್ಜ್ ಆಗುವಾಗ ನೀಡುವ ಡಿಸ್ಜಾರ್ಚ್ ಸಮ್ಮರಿ ಸೇರಿದಂತೆ ಚಿಕಿತ್ಸೆಗೆ ವಿಧಿಸುವ ಶುಲ್ಕಗಳ ವಿವರವನ್ನು ಪರಿಶೀಲಿಸಿ ಅವುಗಳಿಗೆ ತಪ್ಪದೇ ದೃಢೀಕರಣ ಮಾಡಬೇಕು ಎಂದರು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಹಾಗೂ ಮೂಲ ಸೌಕರ್ಯಗಳನ್ನು ಪೂರೈಸುವ ಸಲುವಾಗಿ ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಸೋಂಕಿತರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿ ಕೊಳ್ಳಬೇಕು. ಆದರೆ, ಕೆಲವು ಅಧಿಕಾರಿಗಳು ಈ ಬಗ್ಗೆ ಉದಾಸೀನತೆ ತೋರುತ್ತಿರುವುದು ಕಂಡುಬಂದಿದೆ. ಅವರುಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬರುವ ರೋಗಿಗಳಿಂದ ಯಾವುದೇ ರೀತಿಯ ಮುಂಗಡ ಹಣವನ್ನು ಪಡೆಯುವ ಆಗಿಲ್ಲ ಎಂದ ಅವರು, ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ರೆಫರ್ ಮಾಡುವ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸಿದ್ದಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರ ಕಾರ್ಯಪಡೆ ಸಮಿತಿಯ ವರದಿಯನ್ನು ಆಧರಿಸಿ ಕೋವಿಡ್ ಚಿಕಿತ್ಸೆಯ ಪ್ಯಾಕೇಜ್ ದರವನ್ನು ನಿಗದಿ ಪಡಿಸಿದೆ. ಅದರನ್ವಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಿದ ರೋಗಿಗಳಿಂದ ಪಡೆದುಕೊಳ್ಳಬೇಕು ಎಂದ ಅವರು, ಸಿ.ಟಿ ಸ್ಕ್ಯಾನಿಂಗ್‍ಗೆ ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಂದ 1.500, ಇತರರಿಂದ 2.500 ರೂಗಳನ್ನು ಹಾಗೂ ಎಕ್ಸ್-ರೇ ಗೆ 250 ರೂ ಗಳ ಶುಲ್ಕ ಪಡೆಯಬಹುದಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!