ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆಯಾದರೆ ಉಗ್ರ ಹೋರಾಟ: ಬೆಳಪು ದೇವಿಪ್ರಸಾದ್ ಶೆಟ್ಟಿ

ಉಡುಪಿ : ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾನೂನನ್ನು ಜಾರಿಗೊಳಿಸಿ ಕ್ರಾಂತಿಕಾರಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅಧಿಕಾರ ವಿಕೇಂದ್ರೀಕರಣದೊಂದಿಗೆ ಕಟ್ಟಕಡೆಯ ವ್ಯವಸ್ಥೆಯಾದ ಗ್ರಾಮ ಪಂಚಾಯತ್‌ಗಳು ಗ್ರಾಮೀಣಾಭಿವೃದ್ದಿಗೆ ಭದ್ರ ಬುನಾದಿಯಾಗಿದೆ. ಇದನ್ನು ರಾಜಕಾರಣಗೊಳಿಸಿ, ಅತಂತ್ರಗೊಳಿಸಲು ಪ್ರಯತ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ತಂದರೆ ರಾಜ್ಯಾದ್ಯಂತ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವೆಂದು ಕರ್ನಾಟಕ ರಾಜ್ಯ ಗ್ರಾ.ಪಂ ಒಕ್ಕೂಟದ ಉಪಾಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಎಚ್ಚರಿಸಿದ್ದಾರೆ.

ಗಾಂಧೀಜಿಯವರ ಪರಿಕಲ್ಪನೆಯಂತೆ ಗ್ರಾಮ ರಾಜ್ಯದ ಮೂಲಕ ರಾಮರಾಜ್ಯದ ಕಲ್ಪನೆ ಎಂಬ ಸಿದ್ಧಾಂತದ ಗ್ರಾಮೀಣಾಭಿವೃದ್ಧಿಯ ಗಟ್ಟಿ ಧ್ವನಿಗೆ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಮತ್ತು ಯೋಜನೆಗಳು ಧಕ್ಕಬೇಕೆಂಬ ಆಶಯದಿಂದ ಮೀಸಲಾತಿ ಮತ್ತು ಗ್ರಾಮೀಣಾಭಿವೃದ್ಧಿ ಬಲವರ್ಧನೆಗೆ ನಮ್ಮನ್ನಾಳಿದ ಅನೇಕ ಸರ್ಕಾರಗಳು ಪಂಚಾಯತ್ ರಾಜ್ ವ್ಯವಸ್ಥೆಗೆ ಆಮೂಲಾಗ್ರವಾದ ತಿದ್ದುಪಡಿ ಗಳನ್ನು ತಂದು ಪರಮಾಧಿಕಾರ ಗಳನ್ನು ನೀಡುತ್ತದೆ. ಇದೊಂದು ಸ್ವತಂತ್ರ ಕಾರ್ಯಾಚರಿಸುವ ಸರ್ಕಾರದ ಪ್ರಮುಖ ಅಂಗವಾಗಿರುತ್ತದೆ. ಇದರ 235 ರ ಮೂಲ ಪರಿಚ್ಚೇದಕ್ಕೆ ವಿರುದ್ಧವಾಗಿ ಕೊರೋನಾ ನೆಪವೊಡ್ಡಿ ಅವಧಿ ಮುಗಿದ ಚುನಾಯಿತ ಸದಸ್ಯರ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಸರಕಾರದ ಆಡಳಿತ ಮಂಡಳಿಗೆ ಸದಸ್ಯರ ನಾಮಕರಣ ಮಾಡುವ ಹಿಂದೆ ಷಡ್ಯಂತ್ರವಿದೆ. ಇದು ಇಡೀ ಪಂಚಾಯತ್ ರಾಜ್ ವ್ಯವಸ್ಥೆಗೆ ಕೊಡಲಿ ಏಟು ಬಿದ್ದಂತೆ ಎಂದು ಡಾ| ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ನಾನು ಅಧಿಕಾರ ವಿಕೇಂದ್ರೀಕರಣದ ಸಿದ್ಧಾಂತಕ್ಕೆ ಅಚಲವಾದ ನಂಬಿಕೆ ಇಟ್ಟವನಾಗಿದ್ದು, ಕಳೆದ 30 ವರ್ಷಗಳಿಂದ ತಳಮಟ್ಟದ ಜನರ ತುಳಿತಕ್ಕೆ ಸ್ಪಂದಿಸಿದ್ದೇನೆ. ಗ್ರಾಮೀಣಾಭಿವೃದ್ಧಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದೆಂದು ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳು, ರಾಜ್ಯ ಪಂಚಾಯತ್ ಅಧಿನಿಯಮಗಳು ಪಕ್ಷದ ಮುಕ್ತ ಗ್ರಾಮ ಪಂಚಾಯಿತಿಗಳಿಗೆ ಸದಾಕಾಲ ಚುನಾಯಿತ ಸದಸ್ಯರು ಇರಬೇಕು ಎನ್ನುವ ತೀರ್ಮಾನ ಹೊಂದಿದ್ದು, ರಾಜ್ಯದ 6041 ಗ್ರಾಮ ಪಂಚಾಯತ್ ಪ್ರತಿನಿಧಿಗಳು ಮತ್ತು ಜನರ ಬಯಕೆ ಕೂಡಾ ಇದಾಗಿದೆ. ಇದರ ವಿರುದ್ಧ ಸರ್ಕಾರದ ಕ್ರಮ ಕೈಗೊಂಡರೆ, ನಮ್ಮ ಹಕ್ಕಿಗಾಗಿ ರಾಜ್ಯದಾದ್ಯಂತ ಕೊರೊನಾವನ್ನು ಲೆಕ್ಕಿಸದೆ ಬೃಹತ್ ಚಳುವಳಿ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಸರ್ಕಾರವೇ ಹೊಣೆಯಾಗುತ್ತದೆಂದು ಶೆಟ್ಟಿ ತಿಳಿಸಿದ್ದಾರೆ.

ಪಂಚಾಯತ್ ರಾಜ್ ಪ್ರತಿನಿಧಿಗಳಿಂದ ಆಯ್ಕೆಯಾದ ನಮ್ಮ ಹೆಮ್ಮೆಯ ಪ್ರತಿನಿಧಿಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪ್ರತಾಪಚಂದ್ರ ಶೆಟ್ಟಿಯವರು ಸರಕಾರದ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಗ್ರಾಮೀಣಾಭಿವೃದ್ಧಿ ವ್ಯವಸ್ಥೆ ಮತ್ತು ಸಿದ್ದಾಂತಗಳಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಿದವರು ಅಚಲ ನಂಬಿಕೆಯಿಟ್ಟವರು, ಇದೀಗ ಸರಕಾರ ನಮ್ಮ ಮೂಲ ಆಶಯಗಳಿಗೆ ವಿರುದ್ಧವಾಗಿ ಕಾರ್ಯಾಚರಿಸುವ ಹುನ್ನಾರ ನಡೆಸುವಾಗ ನಾವುಗಳು ಧ್ವನಿ ಎತ್ತಬೇಕಾಗಿದೆ. ನೀವು ನಮ್ಮನ್ನು ಮುಂದುವರಿಸಿ ಅಧಿಕಾರ ಕೊಡಿ ಎಂದು ಹೇಳುತ್ತಿಲ್ಲ. ಆದರೆ ಇಡೀ ದೇಶದಲ್ಲಿ ಇದೀಗ ಸಂಕಷ್ಟದ ಕಾಲ ಕೋವಿಡ್-19 ನಿಂದ ಜನ ತತ್ತರಿಸಿದ್ದಾರೆ. ಗ್ರಾಮ ಪಂಚಾಯತ್‌ಗಳು ಸರಕಾರದ ಆದೇಶಗಳನ್ನು ಸವಾಲಾಗಿ ಸ್ವೀಕರಿಸಿ ಅತ್ಯಂತಪಾರದರ್ಶಕವಾಗಿ ಜಾರಿಗೊಳಿಸಿದ. ಇಂತಹ ಸಂದರ್ಭಗಳಲ್ಲಿ ಸರಕಾರಕ್ಕೆ ರಾಜಕೀಯ ದುರುದ್ದೇಶವೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ನಾವು ಚುನಾವಣೆ ಎದುರಿಸಲು ಸಿದ್ಧ ಅಥವಾ ಮುಂದಿನ ಆರು ತಿಂಗಳ ಉಸ್ತುವಾರಿ ಗಳಾಗಿ ಮುಂದುವರಿಯಲು ಸಿದ್ಧ ಅಥವಾ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದರೂ ನಮ್ಮ ವಿರೋಧವಿಲ್ಲ. ಆದರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆಂಬಂತೆ ನಾಮಕರಣ ಮಾಡಲು ಹೊರಟರೆ ಮುಂದೆ ಬರುವ ಎಲ್ಲಾ ಸರ್ಕಾರಗಳು ಅದನ್ನು ಅನುಕರಣೆ ಮಾಡಿ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಯಾವುದೇ ಸರ್ಕಾರಗಳು ತೊಂದರೆ ನೀಡಿದರೆ ನಾವು ಪಕ್ಷಾತೀತವಾಗಿ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ. ಇದರ ವಿರುದ್ಧ ಜನ ಪ್ರತಿನಿಧಿಗಳು ಧ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಮುಂದೆ ಸಂಸದರು, ಶಾಸಕರನ್ನು ನಾಮಕರಣ ಮಾಡುವ ವ್ಯವಸ್ಥೆ ಜಾರಿಗೊಳಿಸಿದ ಪ್ರಜಾಪ್ರಭುತ್ವ ಸಿದ್ದಾಂತವನ್ನು ಬದಲಾವಣೆಗೊಳಿಸಿ ಎಂದು ಶೆಟ್ಟಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!