ಬಿಆರ್ ಎಸ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ತಕ್ಷಣ ವೇತನ ನೀಡಿ: ಮಹಿಳಾ ಕಾಂಗ್ರೆಸ್ ಒತ್ತಾಯ

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯ ಸಿಬಂದಿಗಳಿಗೆ ಕಳೆದ ಮೂರು ತಿಂಗಳಿಂದ ವೇತನವನ್ನೇ ನೀಡಿಲ್ಲ ಎನ್ನುವ ವಿಚಾರ ತಿಳಿದು ಬಹಳ ಬೇಸರವಾಯಿತು. ಅವರಿಗೂ ತಮ್ಮದೇ ಆದ ಕುಟುಂಬವಿದೆ. ಅವರಿಗೂ ತಮ್ಮ ಕುಟುಂಬದ ಕುರಿತು ಕೆಲವು ಜವಾಬ್ದಾರಿ ಗಳಿರುತ್ತವೆ. ತಾವು ಮಾಡಿರುವ ಕೆಲಸಕ್ಕೆ ಸಿಗಬೇಕಾದಂತಹ ವೇತನವನ್ನು ಪಡೆಯುವುದು ಪ್ರತೀಯೊಬ್ಬನ ಹಕ್ಕು. ಅದನ್ನು ಕೊಡಬೇಕಾದದ್ದು ಕೆಲಸ ಮಾಡಿಸಿಕೊಳ್ಳುವವನ ಕರ್ತವ್ಯ.

ಹಾಗಿರುವಾಗ ಸದ್ರಿ ಆಸ್ಪತ್ರೆಯ ಸಿಬಂದಿಗಳಿಗೆ ನ್ಯಾಯವಾಗಿ ಸಿಗಬೇಕಾದಂತಹ ವೇತನ ವನ್ನು ತಕ್ಷಣ ನೀಡುವಲ್ಲಿ ಸಂಬಂಧ ಪಟ್ಟವರು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಒತ್ತಾಯಿಸಿದ್ದಾರೆ. ಈ ಕೋವಿಡ್ ನಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದ ಜನರು ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವ ಈ ಸಂದರ್ಭ ದಲ್ಲಿ ಬಿಆರ್ ಎಸ್ ಆಸ್ಪತ್ರೆಯ ಆಡಳಿತವು ಸಿಬಂದಿಗಳ ಊಟದ ಬಟ್ಟಲನ್ನೇ ಕಿತ್ತುಕೊಂಡಿರುವುದು ದುರಾದೃಷ್ಟಕರ ವಿಚಾರ. ಮಾತ್ರವಲ್ಲ ಸಿಬಂದಿಗಳ ಪ್ರಾವಿಡೆಂಟ್ ಫಂಡ್ ಅನ್ನು ತಡೆ ಹಿಡಿದಿರುವುದು ನಿರಂಕುಶ ಪ್ರಭುತ್ವದ ಇನ್ನೊಂದು ಮುಖವನ್ನು ತೋರಿಸುತ್ತಿದೆ. ಕೊರೋನಾ ಸಂದರ್ಭದಲ್ಲಿ ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಸಿಬಂದಿಗಳು ಇಂದು ತಮ್ಮ ಜೀವನದ ದಾರಿಯನ್ನು ಕಂಡುಕೊಳ್ಳವುದಕ್ಕಾಗಿ ಪ್ರತಿಭಟನೆಯಲ್ಲಿ ತೊಡಗಿಸೀಕೊಳ್ಳುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ.

ಈ ಕಷ್ಟಕಾಲದಲ್ಲಿ ಅವರಿಗೆ ಹೆಚ್ಚುವರಿ ವೇತನವನ್ನು ನೀಡುವುದರ ಮೂಲಕ ಉದಾತ್ತ ಮನೋಭಾವವನ್ನು ಪ್ರದರ್ಶಿಸ ಬೇಕಾಗಿದ್ದು ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ವೇತನವನ್ನೇ ನೀಡಲು ಹಿಂದೇಟು ಹಾಕುತ್ತಿರುವ ಆಸ್ಪತ್ರೆಯ ಆಡಳಿತದ ವರ್ತನೆ ಯನ್ನು ಮಹಿಳಾ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ.ಆಸ್ಪತ್ರೆಯ ಸಿಬಂದಿಗಳ ವೇತನ ಬೇಡಿಕೆಗೆ ತಕ್ಷಣ ಸ್ಪಂದಿಸಿ ಅವರಿಗೆ ಸಿಗಬೇಕಾದ ವೇತನವನ್ನು ನೀಡಬೇಕು. ಶಾಸಕರಾದ ರಘುಪತಿ ಭಟ್ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಸೂಕ್ತ ನ್ಯಾಯವನ್ನು ದೊರಕಿಸಿಕೊಡಬೇಕು ಎಂದು ಗೀತಾ ವಾಗ್ಳೆ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!