5 ಹಂತಗಳಲ್ಲಿ ಅನ್ ಲಾಕ್ ಮಾಡಲು ಸರ್ಕಾರ ನಿರ್ಧಾರ: ಸಚಿವ ಆರ್.ಅಶೋಕ್
ಬೆಂಗಳೂರು: ಲಾಕ್ ಡೌನ್ ಏಕಾಏಕಿ ತೆರೆಯುತ್ತಿಲ್ಲ, 5 ಹಂತಗಳಲ್ಲಿ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೂನ್ 14ಕ್ಕೆ ಲಾಕ್ ಡೌನ್ ಮುಕ್ತಾಯವಾಗಿ ಅನ್ ಲಾಕ್ ಏಕಾಏಕಿ ಒಂದೇ ಸಲಕ್ಕೆ ಅನ್ ಲಾಕ್ ಆಗುವುದಿಲ್ಲ, ಆ ರೀತಿ ಜನರು ಭಾವಿಸಬೇಡಿ, ಒಂದೇ ಸಲಕ್ಕೆ ತೆರೆದರೆ ಮತ್ತೆ ಕೊರೋನಾ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
ಯಾವ ರೀತಿ ತೆರೆಯುವುದು, ಮೊದಲ ಹಂತದಿಂದ ಯಾವುದಕ್ಕೆಲ್ಲಾ ವಿನಾಯ್ತಿ ನೀಡುತ್ತಾ ಹೋಗುವುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮೊದಲ ಹಂತದಲ್ಲಿ ಖರೀದಿಗೆ ವಿಸ್ತರಿಸಲು ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ, ಪಾರ್ಕ್ ಗಳಲ್ಲಿ ವಾಕಿಂಗ್ ಗೆ ಅವಕಾಶ ನೀಡುವುದು ಹೀಗೆ ಹಂತ ಹಂತವಾಗಿ ಅನ್ ಲಾಕ್ ಮಾಡುವ ಯೋಜನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದರು.
ಬೆಂಗಳೂರು ನಗರದಲ್ಲಿ ಪ್ರಸ್ತುತ 2 ಸಾವಿರದಷ್ಟು ಸಕ್ರಿಯ ಕೊರೋನಾ ಕೇಸುಗಳಿವೆ, ಅದು 500ರೊಳಗೆ ಬರಬೇಕು, ಅಂತಿಮವಾಗಿ ಮುಖ್ಯಮಂತ್ರಿಗಳೇ ಅನ್ ಲಾಕ್ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಅಂತರ್ ಜಿಲ್ಲೆ ಓಡಾಟ ಬಗ್ಗೆ ನಿರ್ಧಾರವಾಗಿಲ್ಲ: ಯಾವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆಯಿರುತ್ತದೆಯೋ ಅಲ್ಲಿ ಹಂತ ಹಂತವಾಗಿ ಅನ್ ಲಾಕ್ ನಡೆಸಲಾಗುವುದು. ಅಂತರ ಜಿಲ್ಲೆ, ಸಾರಿಗೆ ವ್ಯವಸ್ಥೆ ಓಡಾಟ ಆರಂಭ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ, ಅನ್ ಲಾಕ್ ಏಕಾಏಕಿ ತೆಗೆಯಲು ಸಾಧ್ಯವಿಲ್ಲ, ನಿರ್ಬಂಧ ಸಡಿಲಿಸುತ್ತಾ ಹೋದಂತೆ ಸೋಂಕು ಹರಡುವ ಪ್ರಮಾಣ ಕೂಡ ನೋಡಬೇಕಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.