ಪತ್ರಿಕಾ ವಿತರಕರಿಗೂ ಆದ್ಯತೆ ಮೇಲೆ ಕೋವಿಡ್ ಲಸಿಕೆ ವಿತರಿಸುವಂತೆ ಆಗ್ರಹ
ಉಡುಪಿ ಜೂ.9(ಉಡುಪಿ ಟೈಮ್ಸ್ ವರದಿ): ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೆಲವೊಂದು ಕ್ಷೇತ್ರ ಮಾತ್ರ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದೆ. ವೈದ್ಯರು, ಪೊಲೀಸ್ ಅಧಿಕಾರಿಗಳು, ಆಶಾಕಾರ್ಯಕರ್ತೆಯರು, ಮಾಧ್ಯಮದವರು ಹೀಗೆ ಅನೇಕರು ಕೋವಿಡ್ ಸಂದರ್ಭದಲ್ಲಿಯೂ ಬಿಡುವಿಲ್ಲದೆ ಕಾರ್ಯನಿರ್ವಸುತ್ತಿದ್ದಾರೆ.
ಇವರಂತೆ ಪತ್ರಿಕಾ ವಿತರಕರು ಕೂಡಾ ಎಲ್ಲೆಡೆ ಪತ್ರಿಕೆಗಳನ್ನು ಹಂಚುವ ಮೂಲಕ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ಆದರೆ ಮುಂಜಾನೆ ಸೂರ್ಯ ಹುಟ್ಟುವ ಮೊದಲು ಮನೆ ಮನೆ ತೆರಳಿ ಪತ್ರಿಕೆಗಳನ್ನು ತಲುಪಿಸುವ ವಿತರಕರ ಕಾರ್ಯ ಮಾತ್ರ ಎಲೆ ಮರೆ ಕಾಯಿಯಂತಿದೆ. ಸರಕಾರದ ನಿರ್ದೇಶನ ಪಾಲಿಸುವ ಮಾಹಿತಿ ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಿಕಾ ವಿತರಕರಿಗೂ ಕೂಡಾ ಆದ್ಯತೆಯ ಮೇಲೆ ಕೋವಿಡ್ ಲಸಿಕೆಯನ್ನು ನೀಡುವಂತೆ ಪತ್ರಿಕಾ ವಿತರಕರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ತಮ್ಮ ಕಾರ್ಯವನ್ನೂ ಆಧ್ಯತಾ ಗುಂಪಿನಲ್ಲಿ ಸೇರಿಸಿ ಇತರ ಆಧ್ಯತಾ ಗುಂಪುಗಳಂತೆ ಪರಿಗಣಿಸಿ ಕೋವಿಡ್ ಲಸಿಕೆ ನೀಡುವಂತೆ ಪತ್ರಿಕಾ ವಿತರಕರು ಆಗ್ರಹಿಸಿದ್ದಾರೆ.