ಬ್ರಹ್ಮಾವರ: ಜುಗಾರಿ ಅಡ್ಡೆಗೆ ದಾಳಿ – 8 ಮಂದಿ ವಶಕ್ಕೆ
ಬ್ರಹ್ಮಾವರ ಜೂ.9(ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರ ತಾಲೂಕಿನ ಉಪ್ಪೂರಿನ ಹಾಡಿಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ವಶಕ್ಕೆ ಪಡೆದವರನ್ನು ಸುನಿಲ್‌ನಾಯಕ್ (29), ಶ್ರೀಧರ ಪೂಜಾರಿ (30), ಸಂದೀಪ್ (32), ರಾಘವೇಂದ್ರ ಶೆಣೈ (28), ಆಶೋಕ ನಾಯಕ್ (26), ಗುರುರಾಜ ಶೆಟ್ಟಿ (32), ಸತೀಶ ಕುಲಾಲ್ (33), ವಿರೇಶ ಗುಂಡ ನಾಯ್ಕ್ (24) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ. ಹಾದಿಮನಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಕೆಲವರು ಸೇರಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದುದು ಕಂಡು ಬಂದಿದೆ. ಈ ವೇಳೆ ಜುಗಾರಿ ನಿರತ 8 ಮಂದಿಯನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಇದ್ದ ಇಸ್ಪಿಟ್ ಜುಗಾರಿ ಆಟಕ್ಕೆ ಬಳಸಿದ 3,400 ರೂ. ನಗದು, 52 ಇಸ್ಪೀಟ್ ಎಲೆಗಳು, ಹಾಗೂ ಅವುಗಳನ್ನು ಹಾಕಿದ್ದ ಹಳೇಯ ಪೇಪರ್‌ನ್ನು ಮತ್ತು ಆರೋಪಿತರು ಇಸ್ಪೀಟ್ ಆಡಲು ಬಂದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.