ಶೀಘ್ರದಲ್ಲೇ ಎರಡು ಬ್ಯಾಂಕ್ ಖಾಸಗೀಕರಣ
ನವದೆಹಲಿ ಜೂ.09: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದ ಅಂಗವಾಗಿ ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕುಗಳನ್ನು ಶೀಘ್ರದಲ್ಲೇ ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಡವಾಳ ಹಿಂಪಡೆಯುವಿಕೆಗೆ ಸಂಬಂಧಿಸಿದ ಕಾರ್ಯದರ್ಶಿಗಳ ಸಮಿತಿ ಈ ಹಣಕಾಸು ವರ್ಷದಲ್ಲಿ ಖಾಸಗೀಕರಣಗೊಳ್ಳಬೇಕಿರುವ ಎರಡು ಬ್ಯಾಂಕುಗಳ ಹೆಸರನ್ನು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಪ್ರಸ್ತಾವನೆಯನ್ನು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಮತ್ತು ಹಣಕಾಸು ಸೇವೆಗಳ ಇಲಾಖೆ ಪರಿಶೀಲನೆ ನಡೆಸಲಿದ್ದು, ಬ್ಯಾಂಕುಗಳ ಖಾಸಗೀಕರಣಕ್ಕೆ ಅಗತ್ಯವಿರುವ ಕಾನೂನಾತ್ಮಕ ಬದಲಾವಣೆಯ ಕುರಿತಂತೆ ಚರ್ಚೆ ನಡೆಸಲಿದೆ. ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿ ಬ್ಯಾಂಕುಗಳ ಹೆಸರನ್ನು ಅಂತಿಮಗೊಳಿಸಿದ ಬಳಿಕ ಸಂಪುಟ ಸಭೆಯ ಅನುಮೋದನೆಗೆ ಕಳುಹಿಸಿಕೊಡಲಾಗುತ್ತದೆ. ಆದಾಯನ್ನು ಹೆಚ್ಚಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ 4 ಮಧ್ಯಮ ಗಾತ್ರದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಉದ್ದೇಶಿಸಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ನಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳು ಮತ್ತು ಒಂದು ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಪ್ರಕಟಿಸಿದ್ದರು.