| ಬೆಂಗಳೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವಶಕ್ಕೆ ಪಡೆದಿದ್ದ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಅನುಮತಿ ನೀಡಿದೆ. ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ವಾಹನಗಳ ನಿಲುಗಡೆ ಕಷ್ಟವಾಗಲಿದೆ. ಹೀಗಾಗಿ ದಂಡದ ಮೊತ್ತ ಸಂಗ್ರಹಿಸಿ ವಾಹನಗಳನ್ನು ಹಿಂದಿರುಗಿಸಬಹುದು ಎಂದು ತಿಳಿಸಿದೆ.
1.37 ಲಕ್ಷ ದ್ವಿಚಕ್ರ ವಾಹನ, 7,432 ಕಾರುಗಳು, 7,122 ಇತರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆಯ ಅಫಿಡವಿಟ್ ಒಳಗೊಂಡ ಅರ್ಜಿಯನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಶೇಷ ವಿಭಾಗೀಯ ಪೀಠಕ್ಕೆ ಸಲ್ಲಿಸಿದರು.
‘ಇಷ್ಟೊಂದು ವಾಹನಗಳನ್ನು ನಿಲುಗಡೆ ಮಾಡುವುದು ಪೊಲೀಸ್ ಇಲಾಖೆಗೆ ಕಷ್ಟವಾಗಲಿದೆ. ಮಾಲೀಕರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.
‘ವಾಹನಗಳ ಮಾಲೀಕರು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮಾಲೀಕತ್ವ ಪರಿಶೀಲಿಸಿದ ನಂತರ ವಾಹನಗಳನ್ನು ಪೊಲೀಸರು ಹಸ್ತಾಂತರಿಸಬೇಕು. ದ್ವಿಚಕ್ರ ವಾಹನಗಳ ಮಾಲೀಕರಿಂದ ₹500, ನಾಲ್ಕು ಚಕ್ರ ವಾಹನಗಳ ಮಾಲೀಕರಿಂದ ₹1 ಸಾವಿರ, ಸರಕು ಸಾಗಣೆ ವಾಹನಗಳ ಮಾಲೀಕರಿಂದ ₹2 ಸಾವಿರ ದಂಡ ಸಂಗ್ರಹಿಸಬೇಕು’ ಎಂದು ಪೀಠ ತಿಳಿಸಿತು. ಭವಿಷ್ಯದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಂದ ಇದೇ ರೀತಿಯ ದಂಡ ಪಡೆದು ವಾಹನಗಳನ್ನು ಮಾಲೀಕರ ವಶಕ್ಕೆ ನೀಡಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. | |