ಶೀರೂರು ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಜನ್ಮನಕ್ಷತ್ರ ದಿನ: ವಿಶೇಷ ಪೂಜೆ

ಉಡುಪಿ: ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಹಾಗೂ ಶ್ರೀ ರುಕ್ಮಿಣೀ ಸತ್ಯಭಾಮಾ ಸಹಿತ ಅನ್ನವಿಠಲ ದೇವರ ಪೂಜೆಯನ್ನು 48ವರ್ಷಗಳ ಕಾಲ ಸಲ್ಲಿಸಿ ಮೂರು ಪರ್ಯಾಯ ಮಹೋತ್ಸವವನ್ನು ವೈಭವದಿಂದ ನಡೆಸಿದ ಮಹಾಮಹಿಮರಾದ ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮದಿನ ಹಾಗೂ ಜನ್ಮ ನಕ್ಷತ್ರ ದಿನವಾದ ಮಂಗಳವಾರ ಶೀರೂರು ಶ್ರೀಗಳ ಪೂರ್ವಶ್ರಮದ ಕುಟುಂಬಿಕರ ಮನೆಯಲ್ಲಿ ಸಹೋದರ ಲಾತವ್ಯ ಆಚಾರ್ಯರ ನೇತೃತ್ವದಲ್ಲಿ ಹಾಗೂ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿಯವರ ಸಾಂದಿಪನಿ ಸಾಧನಾಶ್ರಮದಲ್ಲಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ಸಲ್ಲಿಸಲಾಯಿತು.

ಕೋವಿಡ್ 19 ಪ್ರಯುಕ್ತ ಕಳೆದ ವರ್ಷ ಮತ್ತು ಪ್ರಸಕ್ತ ವರ್ಷ ಸ್ವಾಮೀಜಿಯವರ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಉಡುಪಿ ಶ್ರೀಕೃಷ್ಣನ ಸನ್ನಿಧಿ ಮತ್ತು ಶೀರೂರು ಮಠ ಸೇರಿದಂತೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಪಾದರ ಕೊಡುಗೆ ಸ್ಮರಣೀಯವಾಗಿದ್ದು, ತನ್ನ ಜನ್ಮದಿನದಂದು ವಿಶೇಷ ಅನ್ನಸಂತರ್ಪಣೆ ಹಾಗೂ ಹಲವಾರು ಕಲಾವಿದರಿಗೆ ಹಾಗೂ ತನಗೆ ಅತ್ಯಂತ ಪ್ರೀಯಕರವಾದ ಹುಲಿ ವೇಷದಾರಿಗಳಿಗೆ ವಿಶೇಷ ಸಹಕಾರವನ್ನೀಡುತ್ತಿದ್ದರು.

ಕೊರೊನದ ಈ ಸಂಧಿಗ್ದ ಕಾಲದಲ್ಲಿ ಅವರೆಲ್ಲರೂ ಸ್ವಾಮೀಜಿಯವರನ್ನು ನೆನಪಿಸುವಂತಾಯಿತು. ಇದೇ ಸಂದರ್ಭದಲ್ಲಿ ಉಡುಪಿ ಗಾಂಧಿ ಆಸ್ಪತೆಯ ಕೋರೋನ ವಾರಿಯರ್ಸ್ ಗೆ ಹಾಗೂ ಸಿಬ್ಬಂದಿಗಳಿಗೆ ಶಿರೂರು ಶ್ರೀಪಾದರ ಪೂರ್ವಾಶ್ರಮದ ಬಂಧುಗಳಿಂದ ಆಹಾರ ಕಿಟ್ ವಿತರಿಸಲಾಯಿತು. ಗಾಂಧಿ ಆಸ್ಪತ್ರೆಯ ಡಾ. ಹರಿಶ್ಚಂದ್ರ ಡಾ. ವ್ಯಾಸರಾಜ ತಂತ್ರಿ, ಡಾ.ವಿದ್ಯಾ ತಂತ್ರಿ ಹಾಗೂ ಶಿರೂರು ಶ್ರೀಪಾದರಪೂರ್ವಾಶ್ರಮದ ಸಹೋದರರು ಸಹಿತ ಕುಟುಂಬದ ಅನೇಕರು ಉಪಸ್ಥಿತರಿದ್ದರು. ಲಾಕ್ ಡೌನ್ ನಿಮಿತ್ತ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!