ಉಡುಪಿ: 16 ಗ್ರಾಮ ಪಂಚಾಯತ್ ಗಳಲ್ಲಿ ಸಂಪೂರ್ಣ ಮುಂದುವರಿಕೆ ಸೀಲ್ ಡೌನ್

ಉಡುಪಿ ಜೂ.8(ಉಡುಪಿ ಟೈಮ್ಸ್ ವರದಿ): ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದ ಜಿಲ್ಲೆಯ 16 ಗ್ರಾಮ ಪಂಚಾಯತ್ ಗಳ ಸಂಪೂರ್ಣ ಲಾಕ್ ಡೌನ್ ಅವಧಿ ಜೂ.14 ರ ವರೆಗೆ ವಿಸ್ತರಿಸಲಾಗಿದೆ.

ಕಳೆದ ಐದು ದಿನಗಳಿಂದ 50 ಕ್ಕೂ ಹೆಚ್ಚು ಪ್ರಕರಣಗಳು ಇರುವ ಗ್ರಾಮಪಂಚಾಯತ್‌ಗಳನ್ನು ಪೂರ್ಣ ಪ್ರಮಾಣದ ಲಾಕ್‌ಡೌನ್
ಮಾಡಿದ ಹಿನ್ನೆಲೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ. ಈ ಹಿನ್ನೆಲೆ ಪ್ರಸಕ್ತ 50ಕ್ಕೂ ಹೆಚ್ಚು ಪ್ರಕರಣಗಳಿರುವ ಬೈಂದೂರು ತಾಲೂಕಿನ ಜಡ್ಕಲ್, ಶಿರೂರು, ನಾಡ ಗ್ರಾಮ ಪಂಚಾಯತಿ, ಕಾರ್ಕಳದ ಬೆಳ್ಮಣ್, ಮಿಯಾರು, ಪಳ್ಳಿ, ಕುಕ್ಕುಂದೂರು, ನಲ್ಲೂರು, ಮರ್ಣೆ, ಹೆಬ್ರಿಯ ವರಂಗ, ಕುಂದಾಪುರದ ಗಂಗೊಳ್ಳಿ, ಆಲೂರು, ಕಾಪುವಿನ ಶಿರ್ವ, ಬೆಳ್ಳೆ, ಬ್ರಹ್ಮಾವರದ ಆವರ್ಸೆ, ಕೊಕ್ಕರ್ಣೆ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್ ಗೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಲಾದ ಗ್ರಾಮ ಪಂಚಾಯತ್ ಗಳಿಗೆ ಅಗತ್ಯ ವಸ್ತುಗಳ ಖರೀದಿಗೆ ನಾಳೆ ಅಂದರೆ ಜೂ.9 ರಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಬಳಿಕ ಜೂ.10 ರಿಂದ 14 ರ ವರೆಗೆ ಮತ್ತೆ 5 ದಿನಗಳ ವರೆಗೆ ಸಂಪೂರ್ಣ ಲಾಕ್ ಡೌನ್ ಮುಂದುವರೆಯಲಿದೆ.

ಇನ್ನು ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗದಿರುವ ಕಾರಣ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿಯವರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಜೂ.10 ರಿಂದ ಜೂ.14 ರ ವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಲಾಗಿದೆ. ಹಾಗೂ ನಾಳೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಯವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಉಳಿದ ಪಂಚಾಯತ್ ಗಳಿಗೂ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ರಲ್ಲಿ ಅರಿವು, ಜಾಗೃತಿ ಮೂಡಿಸುತ್ತಿದ್ದೇವೆ. ಹಾಗೂ ಹೆಚ್ಚು ಸೋಂಕಿನ ಪ್ರಕರಣ ಗಳಿರುವ ಗ್ರಾಮ ಪಂಚಾಯತ್ ಗಳನ್ನು ಕೊರೋನಾ ಮುಕ್ತ ಮಾಡಬೇಕು ಎಂದು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆ ನಡೆಸುತ್ತಿದ್ದು ಪ್ರತಿದಿನ 3000 ದಿಂದ 3500 ದ ವರೆಗೆ ಕೋವಿಡ್ ಪರೀಕ್ಷೆ  ನಡೆಸಲಾಗುತ್ತಿದೆ. ಹಾಗೂ  ಮನೆಗಳನ್ನು  ಸೀಲ್ಡೌನ್ ಮಾಡುವ ನಿರ್ಧಾರದಿಂದ ಪಾಸಿಟಿವಿಟಿ ಕಡಿಮೆಯಾಗಿದೆ. ಜಿಲ್ಲೆಯ ಆಸ್ಪತ್ರೆ ಯಲ್ಲಿ ವೆಂಟಿಲೇಟರ್ ಸಮಸ್ಯೆ ಇತ್ತಾದರೂ ಬೆಡ್ ಗಳ ಕೊರತೆ ಕಂಡು ಬಂದಿಲ್ಲ. ಆಕ್ಸಿಜನ್ ಕೊರತೆಯಿಂದ ಜಿಲ್ಲೆಯಲ್ಲಿ 1200 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ್ದರೂ ಕೂಡಾ 350 ಮಾತ್ರ ಬಳಸುವಂತಾಯಿತು‌. ಆದರೆ ಸದ್ಯ ಜಿಲ್ಲೆಯಲ್ಲಿ ಬೆಡ್ ಗಳ ಕೊರತೆ ಹಾಗೂ ವೆಂಟಿಲೇಟರ್ ಗಳ ಕೊರತೆ ಇರುವ ಬಗ್ಗೆ ಯಾವುದೇ ಕರೆಗಳು ಬರುತ್ತಿಲ್ಲ. ಮುಂದಿನ ಅಲೆಯೊಳಗೆ ಸರಕಾರಿ ಆಸ್ಪತ್ರೆಗಳಿಗೆ ಬೇಕಾದ ಆಕ್ಸಿಜನ್ ಯನ್ನು ಇಲ್ಲೆ ಉತ್ಪಾದನೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಇನ್ನು ಕೋವಿಡ್ 3ನೇ ಅಲೆಯಿಂದ ಮಕ್ಕಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ತಜ್ಣ ವೈದ್ಯರನ್ನು ಕರೆದು ಸಭೆ ನಡೆಸಿ ಚರ್ಚೆಯನ್ನು ಮಾಡಿದ್ದೇವೆ. ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ದಾನಿಗಳ ಸಹಕಾರದಿಂದ, ಸಿಎಸ್ ಆರ್ ಫಂಡ್, ಸರಕಾರದಿಂದ ಬೇಕಾದ ಅಗತ್ಯ ಕಾರ್ಯವನ್ನು ನಡೆಸುತ್ತೇವೆ.ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಸಂಭವಿಸುವ ಸಾಧ್ಯತೆ  ಇರುವುದರಿಂದ ಮಕ್ಕಳಿಗೆ ಬೇಕಾದ ಬೇರೆ ರೀತಿಯ ವೆಂಟಿಲೇಟರ್, ಐಸಿಯು ಬೆಡ್ ಹಾಗೂ ಸಿಸಿಸಿ ಸೆಂಟರ್ ಗಳನ್ನು ತಯಾರು ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಇನ್ನು ಈಗಾಗಲೇ ಜಿಲ್ಲೆಯಲ್ಲಿ ಜಾರಿ ಮಾಡಿರುವ ಸಂಪೂರ್ಣ ಲಾಕ್ ಡೌನ್ ಯಶಸ್ವಿಯಾಗಿದೆ. ಸಂಪೂರ್ಣ ಲಾಕ್ ಡೌನ್ ಮಾಡಿದ ಸುಮಾರು 40 ಗ್ರಾಮಗಳ ಪೈಕಿ ಈಗ 16 ಗ್ರಾಮ ಪಂಚಾಯತ್ ಗಳಲ್ಲಿ ಮಾತ್ರ ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಹಾಗಾಗಿ ಸಂಪೂರ್ಣ ಲಾಕ್ ಡೌನ್ ಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಗ್ರಾಮಾಸ್ಥರನ್ನು ಜಿಲ್ಲಾಧಿಕಾರಿಯವರು ಅಭಿನಂದಿಸಿದರು.

1 thought on “ಉಡುಪಿ: 16 ಗ್ರಾಮ ಪಂಚಾಯತ್ ಗಳಲ್ಲಿ ಸಂಪೂರ್ಣ ಮುಂದುವರಿಕೆ ಸೀಲ್ ಡೌನ್

Leave a Reply

Your email address will not be published. Required fields are marked *

error: Content is protected !!