ನಮ್ಮ ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು- ಶಾಸಕ ಸುನಿಲ್ ಕುಮಾರ್ ಟ್ವೀಟ್
ಉಡುಪಿ: ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪರ–ವಿರುದ್ಧ ಅಥವಾ ಸಹಿ ಸಂಗ್ರಹದ ಕುರಿತಾಗಿ ಯಾರೂ ಕೂಡ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಟ್ವೀಟ್ ಕುತೂಹಲ ಮೂಡಿಸಿದೆ.
ತಮ್ಮ ಟ್ವೀಟ್ ಖಾತೆಯಲ್ಲಿ ಮಾಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳೇ ಎಲ್ಲ ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಆಗುವುದೂ ಇಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ನಮ್ಮ ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟ್ವೀಟ್ ನ್ನು ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಈ ಮೂಲಕ, ನೇರವಾಗಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಿರಿ ಎಂದು ಒತ್ತಾಯಿಸಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆಯೂ ಪ್ರಸ್ತಾಪಿಸದೇ, ಶಾಸಕರ ಅಭಿಪ್ರಾಯ ಹಂಚಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಿ ಎಂದಷ್ಟೇ ಹೇಳಿದ್ದಾರೆ.ಜೊತೆಗೆ, ಬಿಜೆಪಿ ಎಂದರೆ ಸದಾ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುವ ಎಂ.ಪಿ.ರೇಣುಕಾಚಾರ್ಯ ಅವರೂ ಅಲ್ಲ, ದೆಹಲಿಗೆ ದೂರು ಹೇಳಲು ಹೋಗುವ ಸಿ.ಪಿ.ಯೋಗೇಶ್ವರ್ ಅಥವಾ ಬೇರೆಯವರೂ ಅಲ್ಲ. ಇವರಿಂದ ಪಕ್ಷದ ಬಗ್ಗೆ ತಪ್ಪು ಸಂದೇಶಗಳು ರವಾನೆ ಯಾಗುತ್ತವೆ. ನಮ್ಮಂತ ಸಾಕಷ್ಟು ಶಾಸಕರು, ಕಾರ್ಯಕರ್ತರು ಇದ್ದೇವೆ. ನಮಗೂ ನೋವುಗಳಿವೆ, ಅಭಿಪ್ರಾಯಗಳಿವೆ. ಅವುಗಳನ್ನೂ ವರಿಷ್ಠರು ಕೇಳಬೇಕಲ್ಲ’ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ನಿಮ್ಮನ್ ಯಾರು ಕೇಳ್ತಾರೆ ಮಾರ್ರೆ? ದ.ಕ.ಮತ್ತು ಉಡುಪಿಯಿಂದ ಇಷ್ಟು ಜನ ಶಾಸಕರು,ಸಂಸದರು ಇದ್ದೀರಾ.ಏನಾದ್ರೂ ನಿಮ್ಮಮಾತು ಕೇಲ್ತಾರಾ? ಬರಿ ಲಿಂಗಾಯ್ತರು,ಗೌಡ್ರ ಗದ್ಲನೇ ಆಗುದೆ.ನಿಮ್ಗೆ ಓಟು ಕೊಟ್ಟು ನಾವು ಕೆಟ್ವಿ!