ಪತಿಯ ಖತರ್ನಾಕ್ ಕಿಲ್ಲರ್… ನಂದಳಿಕೆಯ ಹೋಮಕುಂಡದಿಂದ ಪರಪ್ಪನಗ್ರಹದವರೆಗೆ…
ಉಡುಪಿ ಜೂ.8(ಉಡುಪಿ ಟೈಮ್ಸ್ ವರದಿ): ಅದು 2016ರ ಜುಲೈ 29 ಓರ್ವ ತಾಯಿ ಪೊಲೀಸ್ ಠಾಣೆಗೆ ಬಂದು ಉದ್ಯಮಿಯಾಗಿರುವ ತನ್ನ ಮಗ ಮನೆಯಲ್ಲಿ ಕಾಣಿಸುತ್ತಿಲ್ಲ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸುತ್ತಾರೆ. ಕೇಸು ದಾಖಲಿಸಿಕೊಂಡು ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಇಳಿದ ಪೊಲೀಸರಿಗೆ ಮಾತ್ರ ಬೆಚ್ಚಿ ಬೀಳಿಸುವ ಸಂಗತಿ ಎದುರಾಗಿತ್ತು. ವ್ಯಕ್ತಿಯ ಪತ್ತೆಗೆ ಇಳಿದ ಪೊಲೀಸರಿಗೆ ಆ ವ್ಯಕ್ತಿಯು ತಮ್ಮ ಪತ್ನಿ, ಮಗ ಹಾಗೂ ಪತ್ನಿಯ ಪ್ರಿಯಕರನಿಂದಲೇ ಕೊಲೆಯಾಗಿದ್ದು ತಿಳಿದು ಬರುತ್ತೆ.
ಇದು ಯಾವುದೇ ಸಿನೆಮಾ ಕಥೆಯಲ್ಲ ಅಥವಾ ದೇಶದ ಯಾವುದೋ ಮೂಲೆಯಲ್ಲಿ ನಡೆದ ಘಟನೆಯೂಲ್ಲ . ಇದು ನಮ್ಮದೇ ಉಡುಪಿಯಲ್ಲಿ ನಡೆದ ರಾಜ್ಯ, ರಾಷ್ಟವನ್ನೇ ಬೆಚ್ಚಿ ಬೀಳಿಸಿದ ಎನ್ ಆರ್ ಐ ಉದ್ಯಮಿ ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ.
ಹೌದು…, 2016 ರ ಜುಲೈ 28 ರಂದು ನಡೆದ ಈ ಕೊಲೆ ಇಡೀ ರಾಜ್ಯವೇ ಒಂದು ಬಾರಿ ಉಡುಪಿಯತ್ತ ತಿರುಗಿ ನೋಡುವಂತೆ ಮಾಡಿತ್ತು. ಇಲ್ಲಿ ಪತ್ನಿ ರಾಜೇಶ್ವರಿ ಶೆಟ್ಟಿಯ ವಾಂಛೆಗೆ ಪತಿ ಭಾಸ್ಕರ್ ಶೆಟ್ಟಿ ಕೊಲೆಯಾಗಿದ್ದರು. ಸದ್ಯ 5 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಈ ಕೊಲೆ ಪ್ರಕರಣಕ್ಕೊಂದು ಅಂತ್ಯ ಸಿಕ್ಕಿದೆ. ಆರೋಪಿಗಳಾದ ರಾಜೇಶ್ವರಿ ಶೆಟ್ಟಿ , ಮಗ ನವನೀತ್ ಶೆಟ್ಟಿ ಹಾಗೂ ಪ್ರಿಯಕರ ನಿರಂಜನ್ ಭಟ್ ಗೆ ಉಡುಪಿ ಜಿಲ್ಲಾ ಸೆಶೆನ್ಸ್ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ಈ 5 ಹಿಂದೆ ನಡೆದ ಈ ಕೊಲೆ ಕಹಾನಿ ಮಾತ್ರ ಯಾವುದೇ ಸಿನೆಮಾ ಕಥೆಗೂ ಕಡಿಮೆ ಇಲ್ಲ.
ಬಡ ಕುಟುಂಬದಲ್ಲಿ ಹುಟ್ಟಿದ ಭಾಸ್ಕರ್ ಶೆಟ್ಟಿ ಅವರು ವಿದೇಶದಲ್ಲಿ ಉದ್ಯಮ ಸ್ಥಾಪಿಸುವ ಮಟ್ಟಕ್ಕೆ ಬೆಳೆದದ್ದು ರೋಚಕ ಕಥೆ. ಭಾಸ್ಕರ್ ಶೆಟ್ಟಿ ಅವರ ತಂದೆ ಶೀನಪ್ಪ ಶೆಟ್ಟಿ ಅವರದ್ದು ಮಧ್ಯಮ ವರ್ಗದ ಕುಟುಂಬ, ಚಿಕ್ಕ ದಿನಸಿ ಅಂಗಡಿ ಇಟ್ಟು ಕೊಂಡಿದ್ದ ಅವರು ಒಟ್ಟು ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದ ದೊಡ್ಡ ಕುಟುಂಬವನ್ನು ನಡೆಸುತ್ತಿದ್ದರು. ಭಾಸ್ಕರ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಗೆ ವಿದ್ಯಾಭ್ಯಾಸ ನಿಲ್ಲಿಸಿ, ಸಣ್ಣಪುಟ್ಟ ಕೆಲಸ ಮಾಡಲಾರಂಭಿಸಿದರು. ಮುಂಬೈಗೆ ಹೋದ ಅವರು ವರ್ಕ್‌ಶಾಪ್ ವೊಂದರಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕನಾಗಿ ದುಡಿದು ಆ ನಂತರ ಕಾರು ಚಾಲನ ಕಲಿತು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸೌದಿ ಅರೇಬಿಯಾಕ್ಕೆ ಹೋದರು. ಅಲ್ಲಿ ಕಾರು ಚಾಲಕರಾಗಿ ಕೆಲಸ ಮಾಡಲಾರಂಭಿಸಿದ ಅವರು, ಕೆಲವೇ ವರ್ಷಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸ್ಥಿತಿವಂತರಾದರು. ಉಡುಪಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದರು. ಸೌದಿ ಅರೇಬಿಯಾದಲ್ಲಿಯೇ ಆರು ಸೂಪರ್ ಮಾರ್ಕೆಟ್‌ಗಳನ್ನು ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದರು.
ಈ ನಡುವೆ ಬಡವರ ಮನೆಯ ಹುಡುಗಿಯಾದರೆ ಮಗನಿಗೆ ಪ್ರೀತಿ ಉಣಿಸಿ ಸಲಹುವಳು ಎಂದು ನಂಬಿದ ಶೀನಪ್ಪ ಶೆಟ್ಟಿ ಅವರೇ ರಾಜೇಶ್ವರಿಯನ್ನು ಸೊಸೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ತಂದೆಯ ಮಾತಿಗೆ ಸೈ ಎಂದ ಭಾಸ್ಕರ್ ಶೆಟ್ಟಿ ಅವರು ರಾಜೇಶ್ವರಿ ಅವರನ್ನು ಮದುವೆಯಾಗಿದ್ದರು. ಆದರೆ ಇದೇ ರಾಜೇಶ್ವರಿ ಶೆಟ್ಟಿಯ ಆಸ್ತಿ, ಹಣದಾಸೆಗೆ ಕನಸಿನ ಮನೆಯಲ್ಲೆ ಹೆಣವಾಗಿದ್ದು ಮಾತ್ರ ದುರಂತ. ಭಾಸ್ಕರ್ ಶೆಟ್ಟಿ ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದರು. ಆದ್ದರಿಂದ ವಿದೇಶದಲ್ಲಿ ಇದ್ದ ಅವರು ಆಗಾಗ ಊರಿಗೆ ಬಂದು ಹೋಗುತ್ತಿದ್ದರು. ಈ ನಡುವೆ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ನಿರಂಜನ್ ನಡುವಿನ ಪರಿಚಯ ಮಿತಿ ಮೀರಿ ಬೆಳೆದಿತ್ತು. ತನ್ನ ಪ್ರಿಯಕರನಿಗಾಗಿ ರಾಜೇಶ್ವರಿ ಶೆಟ್ಟಿ ಫ್ಲಾಟ್ ಖರೀದಿಸುವುದರಿಂದ ಹಿಡಿದು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಳು. ಇದರ ಜೊತೆಗೆ ಆಸ್ತಿ ವಿಚಾರವಾಗಿ ರಾಜೇಶ್ವರಿ ಶೆಟ್ಟಿ ಹಾಗೂ ಭಾಸ್ಕರ್ ಶೆಟ್ಟಿ ನಡುವೆ ತಕರಾರು ನಡೆಯುತ್ತಲೇ ಇತ್ತು. ಈ ನಡುವೆ ರಾಜೇಶ್ವರಿ ಶೆಟ್ಟಿ ಹಾಗೂ ನಿರಂಜನ್ ಭಟ್ ನಡುವಿನ ಸಂಬಂಧದ ಬಗ್ಗೆ ಭಾಸ್ಕರ್ ಶೆಟ್ಟಿಗೆ ತಿಳಿದಿದ್ದು ಮಾತ್ರವಲ್ಲದೆ ಒಂದು ದಿನ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು.
ಇನ್ನೇನು ತಮ್ಮ ಅಸಲಿಯತ್ತು ಹೊರ ಬರುತ್ತದೆ ಎಂದು ಅರಿತ ರಾಜೇಶ್ವರಿ ಶೆಟ್ಟಿ ತನ್ನ ಮಗ ಹಾಗೂ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಅದರಂತೆ ಭಾಸ್ಕರ್ ಶೆಟ್ಟಿಯನ್ನು ಕೊಂದು ದೇಹವನ್ನು ನಿರಂಜನ್ ಭಟ್ ನ ಯಾಗ ಶಾಲೆಯ ಹೋಮ ಕುಂಡದಲ್ಲಿ ಸುಟ್ಟುಹಾಕಿದ್ದರು. ಅಲ್ಲದೆ. ತಮ್ಮ ಕುಕೃತ್ಯ ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ಮೂಳೆಗಳನ್ನು ಪಳ್ಳಿಯ ಹೊಳೆಯಲ್ಲಿ ಒಂದೇ ಕಡೆ ಎಸೆಯದೆ ಬೇರೆ ಬೇರೆ ಕಡೆ ಎಸೆದಿದ್ದರು ಈ ಮೂವರು.ಇನ್ನೇನು ತಮ್ಮ ಕೆಲಸ ಮುಗಿಯಿತು ಎಂದು ಪಾಪಿಗಳು ಅಂದುಕೊಳ್ಳುವಷ್ಟರಲ್ಲಿ ಸತ್ಯ ಹೊರಬಂದು ಆರೋಪಿಗಳು ಪೊಲೀಸರು ಅತಿಥಿಗಳಾಗಿದ್ದರು.
2016 ರ ಜುಲೈ 29 ರಂದು ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಅವರು ಭಾಸ್ಕರ್ ಶೆಟ್ಟಿ ಅವರು ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಈ ಮೂಲಕ ಭಾಸ್ಕರ್ ಶೆಟ್ಟಿ ಅವರ ನಾಪತ್ತೆ ಪ್ರಕರಣ ಕರಾವಳಿಯಲ್ಲಿ ಭಾರೀ ಸದ್ದು ಮಾಡಲಾರಂಭಿಸಿತ್ತು. ಬಳಿಕ ಈ ಪ್ರಕರಣ ತಿರುವು ಪಡೆದುಕೊಂಡು 2016 ಜುಲೈ 28 ರಂದು ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಹಾಗೂ ಪ್ರಿಯಕರ ನಿರಂಜನ್ ಭಟ್ ಜೊತೆ ಸೇರಿ ಭಾಸ್ಕರ್ ಶೆಟ್ಟಿ ಅವರನ್ನು ಕೊಂದು ಹೋಮ ಕುಂಡದಲ್ಲಿ ಸುಟ್ಟು ಹಾಕಿದ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಕರಾವಳಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಪ್ರಕರಣದ ಸತ್ಯಾಂಶ ಹೊರ ಬೀಳುತ್ತಿದ್ದಂತೆ. 2016 ರ ಆ.7ರಂದು ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿನನ್ನು ಮತ್ತು ಆ.8 ರಂದು ನಿರಂಜನ್ ಭಟ್ ನನ್ನು ಪೊಲೀಸರು ಬಂಧಿಸಿದ್ದರು.
ಬಳಿಕ 2016 ರ ಆ.16 ರಂದು ಪಳ್ಳಿ ನದಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ ಮೂಳೆಗಳನ್ನು ಫಾರೆನ್ಸಿಕ್ ಲ್ಯಾಬ್ ನಲ್ಲಿ ಪರೀಕ್ಷಿಸಿದಾಗ ಅದು ಭಾಸ್ಕರ್ ಶೆಟ್ಟಿಯವರ ತಾಯಿ ಹಾಗೂ ತಮ್ಮನ ಡಿಎನ್ ಎ ಯೊಂದಿಗೆ ಹೊಂದಿಕೊಳ್ಳುತ್ತದೆ. ಇದು ಈ ಕೊಲೆ ಪ್ರಕರಣಕ್ಕೆ ಮತ್ತಷ್ಟು ಬಲ ನೀಡುತ್ತೆ ಹಾಗೂ ಪ್ರಕರಣ ಹೊರ ತಿರುವು ಪಡೆದುಕೊಳ್ಳುವಂತೆ ಮಾಡಿತ್ತು.
ಈ ನಡುವೆ ಸಾಕ್ಷ್ಯ ನಾಶದ ಆರೋಪದ ಅಡಿಯಲ್ಲಿ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಅಲ್ಲದೆ ಈ ಐವರು ಆರೋಪಿಗಳ ವಿರುದ್ದ ಪೊಲೀಸರು 1300 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.
ಈ ನಡುವೆ ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ವಿಚಾರಣೆ ಮಧ್ಯೆ ಅನಾರೋಗ್ಯದಿಂದ ಮೃತ ಪಟ್ಟಿದ್ದರು, ಸದ್ಯ ಪ್ರಕರಣದ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿಗೆ ಜಾಮೀನು ಲಭಿಸಿದ್ದರೆ, ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ. ಈ ಎಲ್ಲದರ ನಡುವೆ ರಾಜೇಶ್ವರಿ ಶೆಟ್ಟಿಯ ಜಾಮೀನು ಪಡೆಯುವ ಕಸರತ್ತು ನಡೆಯುತ್ತಲೇ ಇತ್ತು. 2016 ರಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿ ಜಿಲ್ಲಾ ಸೆಶನ್ಸ್ ಕೋರ್ಟ್ 2016 ರ ಡಿಸೆಂಬರ್ 28 ರಂದು ರದ್ದು ಗೊಳಿಸಿತ್ತು. ಅಲ್ಲದೆ 2017 ರ ಅಗಸ್ಟ್ 11 ರಂದು ಕರ್ನಾಟಕ ಹೈಕೋರ್ಟ್ ನಲ್ಲಿಯೂ ರಾಜೇಶ್ವರಿ ಶೆಟ್ಟಿಯ ಜಾಮೀನು ಅರ್ಜಿಯನ್ನು ವಜಾ ಗೊಳಿಸಲಾಗಿತ್ತತು. ಬಳಿಕ ಸುಪ್ರೀಂ ಕೋರ್ಟ್ 2018 ರ ಎಪ್ರಿಲ್ 23 ರಂದು ರಾಜೇಶ್ವರಿ ಶೆಟ್ಟಿ ಗೆ ಶರತ್ತು ಬದ್ದ ಜಾಮೀನು ನೀಡಿತು.
ಒಂದೊಮ್ಮೆ ಪೊಲೀಸ್ ನಿಗ್ರಾಣಿಯಲ್ಲಿರುವಾಗ ನಿರಂಜನ್ ಭಟ್ ಆತ್ಮಹತ್ಯೆಗೂ ಯತ್ನಿಸಿ ಹೈ ಡ್ರಾಮ ಸೃಷ್ಟಿಸಿದ್ದ. ಬಳಿಕ ನಿರಂಜನ ಭಟ್ನ ತಂದೆ ಶ್ರೀನಿವಾಸ ಭಟ್ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ನಿರಂಜನ್ಗೆ ಜಿಲ್ಲಾ ನ್ಯಾಯಾಲಯ 2020 ರ ಜುಲೈ 7ರ ತನಕ ಷರತ್ತುಬದ್ಧ ಜಾಮೀನು ನೀಡಿತ್ತು. ಈ ಮಧ್ಯೆ ಅನೇಕ ಬಾರಿ ರಾಜೇಶ್ವರಿ ಶೆಟ್ಟಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಯನ್ನು ಎದುರಿಸಿದ್ದಳು.
ಇದೀಗ ಸತತ 5 ವರ್ಷಗಳಿಂದ ವಾದ ವಿವಾದ ನಡುವೆ ನಡೆಯುತ್ತಿದ್ದ ವಿಚಾರಣೆಗೆ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಪ್ರಕರಣದ ಐವರು ಆರೋಪಿಗಳ ಪೈಕಿ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎಂ ಅವರು ಈ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.