ಕೊರೋನಾ ಸಮಯದಲ್ಲಿ ಆಮ್ ಆದ್ಮಿ ಪಕ್ಷ ಜನಪರವಾಗಿ ಕೆಲಸ ಮಾಡುತ್ತಿದೆ :ಪೃಥ್ವಿ ರೆಡ್ಡಿ

ಉಡುಪಿ ಜೂ.7( ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಒಬ್ಬನೇ ಒಬ್ಬ ಶಾಸಕ ಅಥವಾ ಸಂಸದರಿಲ್ಲ. ಆದರೂ ಪಕ್ಷ ತನ್ನ ಜವಾಬ್ದಾರಿಯನ್ನು ಅರಿತು ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ನಡುವೆ ನಿಂತು ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು,ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ಆಮ್ ಆದ್ಮಿ ಮಾಡಿರುವ ಕೆಲಸವನ್ನೇ ದೊಡ್ಡ ಪ್ರಮಾಣದಲ್ಲಿ ಮಾಡಿ ಎಷ್ಟೋ ಜನರ ಪ್ರಾಣ ಉಳಿಸಬಹುದಿತ್ತು ಹಾಗೂ ಜನರ ಕಷ್ಟವನ್ನು ಕಡಿಮೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಪಕ್ಷದ ವತಿಯಿಂದ ರಾಜ್ಯದಲ್ಲಿ ಕೈಗೊಂಡಿರುವ ಕೋವಿಡ್ ಕಾರ್ಯದ ಬಗ್ಗೆ ಮಾಹಿತಿ ನೀಡಿ, ಎ.29 ರಂದು ರಾಜ್ಯದ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಾಯವಾಣಿಯನ್ನು ಆರಂಭಿಸಲಾಯಿತು ಈ ಸಹಾಯವಾಣಿಯಲ್ಲಿ ವಿವಿಧ ಪರಿಣತಿಯುಳ್ಳ 46 ನುರಿತ ವೈದ್ಯರು, 12 ಮನೋವೈದ್ಯರು, ಸದಾಕಾಲ ಸಹಾಯವಾಣಿಯ ಕರೆ ಸ್ವೀಕರಿಸಲು 60 ಕಾರ್ಯಕರ್ತರ ತಂಡ ರಚಿಸಲಾಯಿತು.

ಬೆಂಗಳೂರಿನಲ್ಲಿ ಬೆಡ್ ಕೊರತೆಯನ್ನು ನಿಯಂತ್ರಿಸಲು ಹೋಂ ಐಸೋಲೇಶನ್ ರೋಗಿಗಳಿಗೆ ನೆರವಾಗಲು ಆಕ್ಷನ್ ಅಗೈನ್ಸ್ಟ್ ಪಾನ್ಡೆಮಿಕ್ ಎಂಬ ಜನಸ್ನೇಹಿ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನದ ಮೂಲಕ ದಿನದ 24 ಗಂಟೆಯೂ ರೋಗಿಗಳಿಗೆ ಉಚಿತ ಅಕ್ಟಿಮೀಟರ್‌ ವಿತರಣೆ, ವೈದ್ಯಕೀಯ ನೆರವು, ಕೌನ್ಸಿಲಿಂಗ್, ಹೋಂ ಐಫೋಲೇಶನ್ ನೆರವು ನೀಡಲು ಸಹಾಯವಾಣಿ 7292022063 ಆರಂಭಿಸಿತು.

ಆಮ್ ಆದ್ಮಿ ಪಕ್ಷದ ಈ ಸಹಾಯವಾಣಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಈ ಅಭಿಯಾನಕ್ಕೆ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಮತ್ತಷ್ಟು ರೋಗಿಗಳು ಈ ಉಚಿತ ಸೇವೆಯನ್ನು ಪಡೆಯುವಂತಾಗಲಿ ಎಂದು ಒಂದು ತಿಂಗಳ ಕಾರ್ಯವನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದೇವೆ. ಹಾಗೂ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕಳೆದ ಒಂದು ತಿಂಗಳಿನಲ್ಲಿ ಸುಮಾರು 3254 ಉಚಿತ ಅಮೀಟರ್ ವಿತರಣೆ, 16000 ರೋಗಿಗಳಿಗೆ ಹೋಂ ಐಸೋಲೇಶನ್ ನೆರವು, ಪ್ರತಿದಿನ 112 ಕ್ಕೂ ಹೆಚ್ಚು ಹೋಂ ಐಸೋಲೇಶನ್ ರೋಗಿಗಳಿಗೆ ಆಹಾರ ಒದಗಿಸುವಿಕೆ, 1300 ರೋಗಿಗಳಿಗೆ ಮನೋವೈದ್ಯರಿಂದ ಕೌನ್ಸಿಲಿಂಗ್, 3,00,000 ಕ್ಕೂ ಅಧಿಕ ಮಾಸ್ಕ್ ವಿತರಣೆ, ಆಪಾರ್ಟೆಂಟ್ ಗಳು, ವಸತಿ ಸಮುಚ್ಚಯಗಳು, ಮನೆಗಳು ಹಾಗೂ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಕಛೇರಿಗಳು, ಪೊಲೀಸ್ ಠಾಣೆಗಳು, ಪೊಲೀಸ್ ಚೌಕಿಗಳು ಸೇರಿದಂತೆ 18,000 ಕ್ಕೂ ಹೆಚ್ಚು ಕಡೆ ಸಾನಿಟೈಶೇಷನ್, 1400 ಐಸಿಯು ಬೆಡ್ ಗಳ ಒದಗಿಸುವಿಕೆ, 900 ಅಕ್ಸಿಜನ್ ಸಿಲಿಂಡರ್ ಒದಗಿಸುವಿಕೆ, 200 ಕ್ಕೂ ಹೆಚ್ಚು ಪ್ಲಾಸ್ಮಾ ದಾನಿಗಳ ಒದಗಿಸುವಿಕೆ, 260 ಕ್ಕೂ ಹೆಚ್ಚು ರೋಗಿಗಳಿಗೆ ರಕ್ತದ ನೆರವು, ಲಾಕ್’ ಡೌನ್ ಘೋಷಣೆಯಾದ ದಿನದಿಂದಲೂ ಪ್ರತಿನಿತ್ಯ 20,000 ಜನರಿಗೆ ಊಟ ಒದಗಿಸಲಾಗಿದೆ. ಸುಮಾರು 60,000 ಕುಟುಂಬಗಳಿಗೆ ದಿನಸಿ ಕಿಟ್ ಒದಗಿಸಲಾಗಿದೆ ಸುಮಾರು 120 ಆಕ್ಸಿಜನ್ ಕನ್ಸಂಟ್ರೇಟ್ ಗಳನ್ನು ರಾಜ್ಯದ ವಿವಿಧೆಡೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮುಂಬರುವ ಮೂರನೇ ಅಲೆಯು ಇನ್ನೂ ಅಪಾಯಕಾರಿಯಾಗಲಿದ್ದು, ಮಕ್ಕಳಿಗೆ ಗಂಡಾಂತರವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಆದ್ದರಿಂದ ಅದನ್ನು ತಡೆಗಟ್ಟಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ. ಹೊಸ ಮತ್ತು ಹೆಚ್ಚಿನ ಆಮ್ಲ ಜನಕ ಘಟಕಗಳ ಸ್ಥಾಪನೆ, ಮಕ್ಕಳ ಐಸಿಯು ಅಗತ್ಯವಾದ ಔಷಧಿಗಳ ಸಮರ್ಪಕ ದಾಸ್ತಾನು ಇತ್ಯಾದಿಗಳನ್ನು ಈಗಿನಿಂದಲೇ ಮಾಡಬೇಕಿದೆ, ಕೋವಿಚ್ ಸಾಂಕ್ರಾಮಿಕವನ್ನು ತಡೆಗಟ್ಟಲು ಲಸಿಕೆಯೊಂದೇ ಪರಿಣಾಮಕಾರಿ ಉಪಾಯವಾಗಿದ್ದು, ಮೂರನೇ ಆಲೆಗೆ ಮುಂಚೆಯೇ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡಿ, ಬರಲಿರುವ ಸಾವು- ನೋವನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!