ಸಾಮಾಜಿಕ ಕಾರ್ಯಕರ್ತನ ಮೇಲೆ ಕಾರು ಹತ್ತಿಸಿ ಕೊಲೆ- ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡಿ: ರೋಶಿನಿ ಒಲಿವೇರಾ
ಉಡುಪಿ: ಯಡಮೊಗೆ ಸಾಮಾಜಿಕ ಕಾರ್ಯಕರ್ತನ ಮೇಲೆ ಕಾರು ಹತ್ತಿಸಿ ಕೊಲೆಗೈದ ಪ್ರಕರಣದ ಸಮಗ್ರ ತನಿಖೆ ನಡೆಸಿ,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಇಂತಹ ಪ್ರಕರಣಗಳು ಸಮಾಜದಲ್ಲಿ ಮರುಕಳಿಸಲಾರವು. ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿಯಾಗಬೇಕೇ ವಿನಾ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿ ಆಗಬಾರದು ಎಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷೆ ರೋಶಿನಿ ಒಲಿವೇರಾ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷನಿಂದಲೇ ಇಂತಹ ಕುಕೃತ್ಯ ನಡೆದಿರುವುದು ಉಡುಪಿ ಜಿಲ್ಲೆಗೆ ನಾಚಿಗೇಡು ಸಂಗತಿ. ಸಾಮಾಜಿಕ ಕಾರ್ಯಕರ್ತನ ಕೊಲೆಗೆ ಕಾರಣರಾಗಿರುವ ಪಂಚಾಯತ್ ಅಧ್ಯಕ್ಷ ಪ್ರಾಣೇಶ ಯಡಿವಾಳರ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಬೇಕು. ಮಾತ್ರವಲ್ಲದೆ ಮೃತರ ಕುಟುಂಬಕ್ಕೆ ಸರಕಾರದಿಂದ ರೂ. 25 ಲಕ್ಷ ಪರಿಹಾರ ಧನವನ್ನು ತಕ್ಷಣವೇ ಹೊರಡಿಸ ಬೇಕೆಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸರ್ಕಾರಕ್ಕೆ ಆಗ್ರಹಿಸಿದೆ.