ಅವೈಜ್ಞಾನಿಕ ಲಾಕ್‌ಡೌನ್ ವಿರುದ್ದ ಸ್ಟೇಟಸ್ ಹಾಕಿದ ಕಾಯಕರ್ತನ ಕೊಲೆ-ಬಿಜೆಪಿ ಬಣ್ಣ ಬಯಲಾಗಿದೆ: ಅಶೋಕ್ ಕೊಡವೂರು
ಉಡುಪಿ: ಊರಿಗೆ ಬೇಲಿ ಹಾಕಿ ಪ್ರಚಾರಗಿಟ್ಟಿಸಿ ಸರಕಾರದ 50 ಸಾವಿರ ರೂ. ನುಂಗಿ ನೀರು ಕುಡಿಯುವ ಮೊದಲು ಎಡಮೊಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ, ಔಷಧಿ, ಮೂಲ ಸೌಕರ್ಯ ಒದಗಿಸಿ ಬಡ ಕಾರ್ಮಿಕರಿಗೆ ಬದುಕುವ ಅವಕಾಶ ಮಾಡಿಕೊಡಿ ಎಂದು, ತನ್ನದೇ ಊರಿನ ಕೊರೋನಾ ಕಾರ್ಯಪಡೆಯ ದಬ್ಬಾಳಿಕೆ ಮತ್ತು ಅವೈಜ್ಞಾನಿಕ ಲಾಕ್‌ಡೌನ್ ವಿರುದ್ದ ತನ್ನ ಫೇಸ್‌ಬುಕ್ಕಿನಲ್ಲಿ ಸಾಮಾಜಿಕ ಕಳಕಳಿಯ ಸ್ಟೇಟಸ್ ಹಾಕಿದ ಬಿಜೆಪಿ ಕಾಯಕರ್ತ ಉದಯ ಗಾಣಿಗರವರ ಕೊಲೆಯ ಹಿಂದೆ ಅವರದೇ ಪಕ್ಷದ, ಮನುವಾದಿ ಚಿಂತನೆಯ, ಮೂಲಭೂತ ವಾದಿಗಳ ವ್ಯವಸ್ಥಿತ ಪಿತೂರಿ ಅಡಗಿದ್ದು ಬಿಜೆಪಿಯ ಬಣ್ಣ ಬಯಲಾಗಿದೆ ಎಂದು ಎಡಮೊಗೆ ಕೊಲೆ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರ್ರಿಯಿಸಿದ್ದಾರೆ.
ಗ್ರಾಮ ಪಂಚಾಯತು ಅಧ್ಯಕ್ಷ ಪ್ರಾಣೇಶ ಎಡಿಯಾಳರ ನಿರಂಕುಶ ಕಾರ್ಯವೈಖರಿ ಮತ್ತು ಅವ್ಯವಹಾರಗಳ ಬಗ್ಗೆ ಅಕ್ಷೇಪ ಮಾಡುತ್ತಿದ್ದ ಸಮಾಜಮುಖಿ ಚಿಂತನೆಯ ಉದಯ ಗಾಣಿಗರವರನ್ನು ಕೊಲೆ ಮಾಡುವುದು ಪ್ರಾಣೇಶ್ ಬಳಗದ ಪೂರ್ವ ನಿಯೋಜಿತ ಕೃತ್ಯವಾಗಿತ್ತು. ಅದರಲ್ಲಿ ಭವಿಷತ್ತಿನ ರಾಜಕೀಯದ ದೂರ ದೃಷ್ಟಿಯು ಇತ್ತು ಎನ್ನಲಾಗಿದ್ದು, ಸುಫಾರಿ ಕೊಲೆ ಗಟುಕರೂ ಹೇಸುವ ರೀತಿಯಲ್ಲಿ ಹೆಂಡತಿ ಮಕ್ಕಳ ಎದುರೆ ಕಾರು ಹರಿಸಿ ಕೊಲೆ ಮಾಡುವುದರ ಹಿಂದೆ ಕೊಲೆಯನ್ನು ಮುಚ್ಚಿ ಹಾಕುವ ಕಾನೂನಾತ್ಮಕ ಷಡ್ಯಂತ್ರವಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಲೆಯಾದ ಉದಯ ಗಾಣಿಗರ ಹೆಂಡತಿಯೇ ಈ ಬಗ್ಗೆ ತಿಳಿಸಿದ್ದರಿಂದ ಈ ನೀಚ ಕೃತ್ಯವೆಸಗಿದವರೆನ್ನಲಾದ ಪ್ರಧಾನ ಆರೋಪಿ ಪ್ರಾಣೇಶ್ ಎಡಿಯಾಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಅಗ್ರಹಾರ,ಹಾಗೂ ಕೊಲೆಗಡುಕರಿಗೆ ಆಶ್ರಯ ನೀಡಿದವರನ್ನೂ ಬಂಧಿಸಿ ಜಾಮೀನು ರಹಿತ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಉದಯ ಗಾಣಿಗರವರ ಹೆಂಡತಿ, ಸಂತೃಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.