ಹೆಬ್ರಿ: ವೈದ್ಯ ಸಹಿತ 7 ಸಿಬ್ಬಂದಿಗೆ ಕೊರೋನ ಪಾಸಿಟಿವ್, ಆರೋಗ್ಯ ಕೇಂದ್ರ ಸೀಲ್‌ಡೌನ್
ಹೆಬ್ರಿ ಜೂ.27: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಸೇರಿದಂತೆ ಒಟ್ಟು ಏಳು ಮಂದಿ ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಕೇಂದ್ರವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಪಾಸಿಟಿವ್ ಬಂದವರಲ್ಲಿ ಅಲ್ಲಿನ ವೈದ್ಯರೊಬ್ಬರು ಸೇರಿದ್ದಾರೆ. ಅಲ್ಲದೆ ಆಸ್ಪತ್ರೆ ಗ್ರೂಪ್ ಡಿ ನೌಕರರು ಹಾಗೂ ಚಾಲಕರಿಗೆ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ ವೈದ್ಯರ ಕಾರ್ಕಡದ ಮನೆಯನ್ನೂ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ ನೇತೃತ್ವದಲ್ಲಿ ಪೊಲೀಸರು ಕೇಂದ್ರವನ್ನು ಇಂದು ಮಧ್ಯಾಹ್ನ ಸೀಲ್‌ಡೌನ್ ಮಾಡಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. 48 ಗಂಟೆಗಳ ಕಾಲ ಕೇಂದ್ರವನ್ನು ಬಂದ್ ಮಾಡಿ, ಎರಡು ಬಾರಿ ಸ್ಯಾನಿಟೈಸರ್ ಮಾಡಲಾಗುತ್ತದೆ. ಇಂದು ಒಂದು ಬಾರಿ ಸ್ಯಾನಿಟೈಸ್ ಮಾಡಲಾಗಿದೆ, ನಾಳೆ ಇನ್ನೊಂದು ಬಾರಿ ಮಾಡಲಾಗುತ್ತದೆ. ಮೂರನೆ ದಿನ ಕೇಂದ್ರವನ್ನು ಪುನರಾರಂಭಿಸಲಾಗುವುದು. ಸದ್ಯ ಈ ಕೇಂದ್ರದ ಬದಲಿ ಬದಲಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಸಿಬ್ಬಂದಿಗಳು ಹೋಮ್ ಕ್ಯಾರಂಟೇನ್‌ನಲ್ಲಿರುವವರ ಮಾದರಿ ಸಂಗ್ರಹಕ್ಕೆ ಮನೆಮನೆಗೆ ತೆರಳಿದ್ದ ವೇಳೆ ಈ ರೋಗ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. |