ಉಡುಪಿ: ಸದ್ದಿಲ್ಲದೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿರುವ ‘ಸ್ಪೀಡ್ ಡೆವಿಲ್ಸ್’ ತಂಡ
ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ಕೋವಿಡ್ 2ನೇ ಅಲೆಗೆ ಉಡುಪಿ ಜಿಲ್ಲೆ ಅಕ್ಷರಶಃ ತತ್ತರಿಸಿದೆ ಅಂದರೆ ತಪ್ಪಾಗಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾದ ಕೋವಿಡ್ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ಪರದಾಡುವಂತೆ ಮಾಡಿತ್ತು. ಲಾಕ್ ಡೌನ್ ಆರಂಭದಿಂದಲೂ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಕುಟುಂಬಗಳಿಗೆ ಆಹಾರ ಕಿಟ್ ಗಳು, ದಿನನಿತ್ಯದ ಸಾಮಾಗ್ರಿಗಳ ನೆರವು ನೀಡುವ ಮೂಲಕ ಅನೇಕ ಯುವಕರ ತಂಡಗಳು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.
ಅವುಗಳಲ್ಲಿ ಉಡುಪಿಯ ಸ್ಪೀಡ್ ಡೆವಿಲ್ಸ್ ಎನ್ನುವ ಯುವಕರ ತಂಡ ಕೂಡಾ ಒಂದು. ಬಲಕೈ ಮಾಡಿದ ಸೇವೆ ಎಡ ಕೈಗೆ ಗೊತ್ತಾಗ ಬಾರದು ಎನ್ನುವ ರೀತಿಯಲ್ಲಿ ಪ್ರಚಾರ ಪಡೆಯದೇ ಸದ್ದಿಲ್ಲದೆ ಸಂಕಷ್ಟದಲ್ಲಿರುವವರಿದೆ ಸ್ಪಂದಿಸುತ್ತಾ ಬರುತ್ತಿದೆ ಈ ತಂಡ. ವಾಟ್ಸ್ ಅಪ್ ಗ್ರೂಪ್ ನಿಂದ ಪ್ರಾರಾಂಭವಾದ ಈ ಯುವಕರ ತಂಡ ಪ್ರತಿದಿನ ನೂರಾರು ಮನೆಗಳಿಗೆ ಅಹಾರ ಕಿಟ್ ವಿತರಿಸುತ್ತಿದ್ದಾರೆ. ತಾವು ದುಡಿದ ದುಡಿಮೆಯ ಒಂದು ಭಾಗದಲ್ಲೇ ಅಹಾರ ಕಿಟ್ ನೀಡಲು ಮುಂದಾದ ಯುವಕರಿಗೆ ಇದೀಗ ಇತರ ಸ್ನೇಹಿತರು ಕೈ ಜೋಡಿಸಿದ್ದಾರೆ.
ಯಾವುದೇ ಪ್ರಚಾರ ಬಯಸದ ಈ ತಂಡ ಸಾಮಾಜಿಕ ಜಾಲತಾಣಗಳ ಮೂಲಕವೇ ಜನರನ್ನ ಸಂಪರ್ಕಿಸುವ ಕಾರ್ಯ ಮಾಡುತ್ತಿದೆ.
ಕಿಟ್ ಗಳನ್ನು ನೀಡುವಾಗ ಫೋಟೊ ತೆಗೆಯುತ್ತಾರೆ ಅನ್ನುವ ಕಾರಣಕ್ಕೆ ಹಲವರು ಆಹಾರ ಕಿಟ್ ಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಕಾರಣಕ್ಕೆ ಕಿಟ್ ವಿತರಿಸುವಾಗ ಈ ಯುವಕರ ತಂಡ ಎಲ್ಲಿಯೂ ಕೂಡ ಫೋಟೋಗಳನ್ನ ತೆಗೆಯುವುದಿಲ್ಲ ಎನ್ನುವುದು ವಿಶೇಷ. ಇದೇ ಕಾರಣಕ್ಕೆ ಹಸಿದವರು ಮುಕ್ತವಾಗಿ ಈ ತಂಡದೊಂದಿಗೆ ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಹಾಗೂ ಮನೆ ಬಾಗಿಲಿಗೆ ಆಹಾರ ಕಿಟ್ ಗಳನ್ನು ನೀಡುವ ಮೂಲಕ ತಮ್ಮ ಸೇವೆ ಮಾಡುತ್ತಾ ಬರುತ್ತಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ ದಿನೇ ದಿನೇ ಕಿಟ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ಅಗತ್ಯತೆಗೆ ತಕ್ಕ ಹಾಗೆ ಬೇಡಿಕೆಯನ್ನು ಪೂರೈಸಲು ದಾನಿಗಳ ನೆರವನ್ನು ಈ ಯುವಕರು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಯುವಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಇಂತಹ ಸಮಯದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.