ಉಡುಪಿ:ಕೋವಿಡ್ ಸೋಂಕಿಗೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಲಿ
ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಬನವಾಸಿ ಅವರು ಕೋವಿಡ್ ಸೋಂಕಿನಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದ ಇವರು ಉತ್ತರ ಕನ್ನಡ ಜಿಲ್ಲೆ ಬನವಾಸಿ ಮೂಲದವರಾಗಿದ್ದರು. ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಇವರು, ಕಳೆದ ವರ್ಷ 24ರಂದು ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಪಡುಬಿದ್ರಿ ಬೀಚ್ ಬ್ಲೂ ಫ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವಲ್ಲಿ ಇವರು ಶ್ರಮಿಸಿದ್ದರು. ದ.ಕ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಸೇವಾ ಮುಂಬಡ್ತಿ ಹೊಂದಿದ್ದರು.
ಸೋಮಶೇಖರ್ ಬನವಾಸಿ ಅವರ ನಿಧನಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸಂತಾಪ ಸೂಚಿಸಿದ್ದು, ಅತ್ಯಂತ ನಿಷ್ಠೆಯ ಸಹೋದ್ಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಸೋಮಶೇಖರ್ ಅವರನ್ನು ಕಳೆದುಕೊಂಡು ಹೃದಯ ಭಾರವಾಗಿದೆ ಇವರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಲಿ ಎಂದಿದ್ದಾರೆ.
Om Shanthi. We lost a good sincere Officer.