ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ಆದಿವಾಸಿಗಳ ಜೀವ ಮತ್ತು ಜೀವನವನ್ನು ಉಳಿಸಿ’ ಎನ್ನುವ ಘೋಷ ವಾಕ್ಯ ದೊಂದಿಗೆ ವಿವಿಧ ಬೇಡಿಕೆ ಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಮನೆ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ‘ಪಾರಂಪಾರಿಕ ವಾದ್ಯಗಳ ವಾದನ ಮತ್ತು ಖಾಲೀ ತಟ್ಟೆಗಳ ಪ್ರದರ್ಶನ’ ನಡೆಸಿ, ಕೋವಿಡ್ ನಿಯಮಗಳನ್ನು ಪಾಲಿಸಿ ಮನೆ, ಮನೆಗಳ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಜೊತೆಗೆ ತಮ್ಮ ಬೇಡಿಕೆಗಳಿಗೆ ತುರ್ತಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಲಾಯಿತು.
ಈ ಪ್ರತಿಭಟನೆ ಯ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿರುವ ಆದಿವಾಸಿಗಳ ಪ್ರಮುಖ ಬೇಡಿಕೆಗಳು.
1. ಆದಿವಾಸಿಗಳಿಗೆ, ಅಲೆಮಾರಿ ಸಮುದಾಯಗಳಿಗೆ ಉಚಿತ ಪೌಷ್ಟಿಕ ಆಹಾರ ಮತ್ತು ಜೀವನಾವಶ್ಯಕ ಎಲ್ಲಾ ವಸ್ತುಗಳಿರುವ ರೇಷನ್, ಅಗತ್ಯ ದಿನಸಿ ಕಿಟ್‌ಗಳನ್ನು ಅವರು ನೆಲೆಸಿರುವ ಹಾಡಿ, ಪ್ರದೇಶಗಳಿಗೆ ಕೂಡಲೇ ನೀಡುವುದು. 2. ಎಲ್ಲಾ ಆದಿವಾಸಿಗಳಿಗೆ, ಅಲೆಮಾರಿ ಸಮುದಾಯಗಳಿಗೆ ಸಾರ್ವತ್ರಿಕ, ಉಚಿತವಾದ ಕೋವಿಡ್ ಲಸಿಕೆಯನ್ನು ನೀಡಬೇಕು. 3. ಆದಿವಾಸಿಗಳು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ (ಕನಿಷ್ಠ 5 ಕಿ.ಮೀ.ಒಳಗೆ) ‘ಕೋವಿಡ್ ಚಿಕಿತ್ಸಾ ಕೇಂದ್ರ’ ವನ್ನು ಕೂಡಲೇ ಸ್ಥಾಪಿಸಿ ಅಗತ್ಯವಿರುವ ವೈದ್ಯರು, ನರ್ಸ್ ಗಳು ಮುಂತಾದ ಸಿಬ್ಬಂದಿಯನ್ನು ನೇಮಿಸಿ ಕಾರ್ಯಾರಂಭಿಸಬೇಕು. 4. ಆದಿವಾಸಿಗಳು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಪ್ರತಿ ಆದಿವಾಸಿ ಕುಟುಂಬಕ್ಕೆ ಪ್ರತಿ ತಿಂಗಳೂ ರೂ.10,000 ಗಳನ್ನು ಸಹಾಯ ಧನವನ್ನಾಗಿ ನೀಡಬೇಕು. ವಿಶೇಷವಾಗಿ, ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು. 5. ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವ ವಿದ್ಯಾರ್ಥಿ ವೇತನ ಕೂಡಲೇ ನೀಡುವುದು. ಆದಿವಾಸಿ ಮಕ್ಕಳ ಶಿಕ್ಷಣದ ಪ್ರಕ್ರಿಯೆ ದುರ್ಬಲವಾಗದಂತೆ ಕ್ರಮ ವಹಿಸಬೇಕು. 6. ಅರಣ್ಯದಲ್ಲಿನ ಕಿರು ಉತ್ಪನ್ನಗಳ ಸಂಗ್ರಹದ ಮೂಲಭೂತ ಅರಣ್ಯ-ಸಮುದಾಯದ ಹಕ್ಕಿಗೆ ಮುಕ್ತ ಅವಕಾಶವನ್ನು ಕಲ್ಪಿಸಬೇಕು. ಆ ವಸ್ತುಗಳಿಗೆ ಸೂಕ್ತ ಲಾಭದಾಯಕ ಬೆಲೆಯನ್ನು ನೀಡಿ ಸರಕಾರವೇ ಖರೀದಿಸಬೇಕು. 7. ಆದಿವಾಸಿಗಳ ಸಂರಕ್ಷಣೆಗೆ ಸರಕಾರ ವಿಶೇಷವಾದ ಅನುದಾನ ಹಣವನ್ನು ನೀಡಬೇಕು. ಅಲ್ಲದೇ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಯೋಜನೆಯ ಅಡಿಯಲ್ಲಿರುವ ರೂ.26,005 ಕೋಟಿ ರೂ.ಗಳ ಹಣದಲ್ಲಿ ಒಂದು ಭಾಗವನ್ನು ತುರ್ತಾಗಿ ದಲಿತರು ಮತ್ತು ಆದಿವಾಸಿಗಳ ಬೇಡಿಕೆಗಳ ಇತ್ಯರ್ಥಕ್ಕೆ ಬಳಸಬಹುದು. 8. ಉಡುಪಿ ಜಿಲ್ಲೆಯ ಕೊರಗ ಸಮುದಾಯದ ನಿರುದ್ಯೋಗಿ ಯುವಜನರಿಗೆ 2020- 21 ನೇ ಸಾಲಿನ ನಿರುದ್ಯೋಗ ಭತ್ಯೆ ನೀಡಿರುವುದಿಲ್ಲ. ಅಲ್ಲದೆ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ನಿರುದ್ಯೋಗ ಭತ್ಯೆ ನೀಡಿದರೆ ಅನುಕೂಲವಾಗಲಿದೆ. ಆದ್ದರಿಂದ ಈ ಕೂಡಲೇ ನಿರುದ್ಯೋಗ ಭತ್ಯೆಯನ್ನು ಅವರ ಖಾತೆಗಳಿಗೆ ನೇರವಾಗಿ ನೀಡುವುದು. 9. ಜಿಲ್ಲೆಯಲ್ಲಿ ಕೊರಗ ಮಲೆಕುಡಿಯ ಸಮುದಾಯಗಳಿಗೆ ನೀಡಲಾಗುತ್ತಿರುವ ಉಚಿತ ಪೌಷ್ಟಿಕ ಆಹಾರ ಯೋಜನೆಯನ್ನು ಉಡುಪಿ ಜಿಲ್ಲೆಯ ಹಸಲ( ಹಸಲರು) ಸಮುದಾಯಗಳಿಗೆ ವಿಸ್ತರಿಸಿ ಜಾರಿಗೊಳಿಸುವುದು. 10. ಉಡುಪಿ ಜಿಲ್ಲೆಯ ಕೊರಗ, ಮಲೆಕುಡಿಯ, ಹಸಲ,ಮರಾಠಿ ನಾಯಕ ಸಮುದಾಯಗಳಿಗೆ ಮೊದಲ ಆದ್ಯತೆಯಲ್ಲಿ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲು ಕ್ರಮವಹಿಸುವುದು. 11. ಪರಿಸ್ಥಿತಿಯು ಗಂಭೀರ ಇರುವ ಹಿನ್ನೆಲೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರು ಉಡುಪಿ ಜಿಲ್ಲೆ ಹಾಗೂ ರಾಜ್ಯ ಸಹ ಸಂಚಾಲಕರಾಗಿರುವ ಶ್ರೀಧರ ನಾಡ, ಜಿಲ್ಲಾ ಸಹ ಸಂಚಾಲಕರಾಗಿರುವ ಗಣೇಶ್ ಆಲೂರು, ದೀಪಾ ಜಪ್ತಿ, ಜಲಜ ಕೆರಾಡಿ, ಮೂರ್ತಿ ಕಬಿನಾಲೆ, ಸುಧಾಕರ ಕಾರೆಬೈಲು, ಸಂಜು ಕಾರೆಬೈಲು, ರಾಜ್ಯ ಸಂಚಾಲಕ ವೈ.ಕೆ.ಗಣೇಶ್, ರಾಜ್ಯ ಸಹ ಸಂಚಾಲಕ ಎಸ್.ವೈ. ಗುರುಶಾಂತ್ ಮೊದಲಾದವರು ಇದ್ದರು.
| | |