ಬಡ-ಮಧ್ಯಮ ವರ್ಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ತಂದ ರಾಜ್ಯ ಸರಕಾರ: ವೆರೋನಿಕಾ ಕರ್ನೆಲಿಯೊ
ಉಡುಪಿ: ಕೊರೋನಾ ಅಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರ ಕನಿಷ್ಠ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯನ್ನು ರಾಜ್ಯ ಸರಕಾರ ತಂದೊಡ್ಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಷ್ಟು ದಿನದ ಲಾಕ್ ಡೌನ್ ಮಾಡಿರುವುದರಿಂದ ಮಧ್ಯಮ ಹಾಗೂ ಬಡವರ್ಗದ ಜನ ತಮ್ಮ ನೋವನ್ನು ಹೇಳಿಕೊಳ್ಳಲು ಆಗದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಆಡಳಿತ ನೀಡುವ ಸರಕಾರ ಕನಿಷ್ಠ ಆ ಕುಟುಂಬಗಳಿಗೆ ದಿನಸಿ ಕಿಟ್ ನೀಡುವ ಅವರ ನೆರವಿಗೆ ಬರಬೇಕಾಗಿತ್ತು ಆದರೆ ಸರಕಾರ ತನಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ. ನೆರೆಯ ಕೇರಳ ಸರಕಾರ ಕಳೆದ ಲಾಕ್ ಡೌನ್ ಹಾಗೂ ಈ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಜವಾಬ್ದಾರಿಯಿಂದ ವರ್ತಿಸುತ್ತಿದ್ದ ಯಾರೆಲ್ಲ ಕಷ್ಟದಲ್ಲಿದ್ದಾರೋ ಅಂತಹ ಕುಟುಂಬಗಳಿಗೆ ಕಿಟ್ ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಆದರೆ ಕರ್ನಾಟಕ ಸರಕಾರಕ್ಕೆ ಆ ಬಗ್ಗೆ ಯಾವುದೇ ಚಿಂತೆ ಇಲ್ಲ ಬಡವರಿಗೆ ಕೇವಲ ಪಡಿತರ ಅಂಗಡಿಯಲ್ಲಿ ಅಕ್ಕಿ ನೀಡಿರುವುದು ಬಿಟ್ಟರೆ ಬೇರೆ ಏನೂ ಕೂಡ ನೀಡಿಲ್ಲ. ಕೇವಲ ಅಕ್ಕಿ ಪಡೆದು ಬಡವರು ಏನು ಮಾಡುವುದು ಒಂದು ಕಡೆ ಅವರಿಗೆ ಕೆಲಸಕ್ಕೂ ಹೋಗಲು ಆಗದೆ ಇತ್ತ ಊಟಕ್ಕೆ ಅಗತ್ಯ ವಸ್ತುಗಳು ಇಲ್ಲದೆ ಬದುಕು ಎನ್ನುವುದು ಅವರಿಗೆ ಕಷ್ಟವಾಗಿದೆ. ಇನ್ನಾದರೂ ಕೂಡ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಆವರು ಆಗ್ರಹಿಸಿದ್ದಾರೆ.ಇಂತಹ ಮಹಾ ಮಾರಿ ಕೊರೋನಾ ಸಂಕಷ್ಟದ ಸಮಯದಲ್ಲಿ ಯಾವುದೇ ರೀತಿಯ ಮಾನವೀಯತೆ ಇಲ್ಲವೆಂಬಂತೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವ ಸರಕಾರದ ವರ್ತನೆ ಖಂಡನೀಯವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಚಿಕ್ಕ ಕೂಲಿ ಕೆಲಸಕ್ಕಾಗಿ ಹೋಗುವ ವ್ಯಕ್ತಿ ಕೂಡ ತನ್ನ ಅಗತ್ಯಕ್ಕಾಗಿ ಚಿಕ್ಕ ದ್ವಿಚಕ್ರ ವಾಹನ ಹೊಂದಿರುತ್ತಾನೆ ಅಂತಹ ವ್ಯಕ್ತಿಗಳು ಬೆಲೆ ಏರಿಕೆಯಿಂದ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಜನರಿಗೆ ದುಬಾರಿ ತೆರಿಗೆ ಹಾಕಿ ಅವರಿಂದ ಲೂಟಿ ಮಾಡಿದ ಹಣದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದುಕುತ್ತಿರುವುದು ನಾಚಿಕೆಗೇಡು. ಸರಕಾರ ತನ್ನ ತಿಜೋರಿಯನ್ನು ತುಂಬಿಸಿಕೊಳ್ಳುವುದಲ್ಲದೆ ಖಾಸಗಿ ಒಡೆತನದ ರಿಲಾಯನ್ಸ್, ಅದಾನಿ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ. ಜನರ ತೆರಿಗೆ ಹಣದಿಂದ ಸರಕಾರಗಳು ಐಶಾರಾಮಿ ಜೀವನ ನಡೆಸುವ ಬದಲು ಈ ಸಂದರ್ಭದಲ್ಲಿ ತೈಲ ಬೆಲೆಗಳ ತೆರಿಗೆಯನ್ನು ಕಡಿಮೆ ಗೊಳಿಸಿದರೆ ಕನಿಷ್ಠ ಸಾಮಾನ್ಯ ಜನ ಸುಖದಿಂದ ಬದುಕಬಹುದು. ಸರಕಾರ ಬಡವರ ನೆರವಿಗೆ ಬರುವ ಬದಲು ಅವರ ತೆರಿಗೆ ರೂಪದಲ್ಲಿ ಲೂಟುವ ಕೆಲಸವನ್ನು ನಿಲ್ಲಿಸಬೇಕು. ಅಲ್ಲದೆ ಇಂತಹ ಕಷ್ಟಕಾಲದಲ್ಲಿ ವಿದ್ಯುತ್ ಬೆಲೆ ಕೂಡ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. |