ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುತ್ತಿಲ್ಲ.
ಈ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಪಾಸಿಟಿವಿಟಿ ದರ 5 ಶೇ. ಕ್ಕಿಂತ ಕಡಿಮೆ ಬರುವ ಜಿಲ್ಲೆಗಳಿಗೆ ಮುಂದಿನ ಲಾಕ್ ಡೌನ್ ನಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಮಾಡಲು ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಆದರೆ ಸದ್ಯ ಉಡುಪಿ ಜಿಲ್ಲೆಯಲ್ಲಿ ಸೋಂಕು ಗ್ರಾಮೀಣ ಭಾಗದಲ್ಲಿ ಹೆಚ್ಚು ಕಂಡು ಹರಡುತ್ತಿರುವುದರಿಂದ ಅನ್ಲಾಕ್ ಪ್ರಕ್ರಿಯೆಗೆ ತಡೆಯಾಗಬಹುದೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾಕೆಂದರೆ ಮುಖ್ಯಮಂತ್ರಿಗಳು ಪಾಸಿಟಿವಿಟಿ ದರ 5 ಶೇ. ಕ್ಕಿಂತ ಕಡಿಮೆ ಇರುವ ಜಿಲ್ಲೆಗಳನ್ನು ಅನ್ಲಾಕ್ ಮಾಡುವುದಾಗಿ ಹೇಳುವ ಜೊತೆ ಜೊತೆಗೆ ಪಾಸಿಟಿವಿಟಿ ದರ ಹೆಚ್ಚು ಇದ್ದಲ್ಲಿ ಅನ್ಲಾಕ್ ಪ್ರಕ್ರಿಯೆಗೆ ಅವಕಾಶ ನೀಡಲಾಗುವುದಿಲ್ಲ ಎಂದೂ ತಿಳಿಸಿದ್ದರು.
ಆದ್ದರಿಂದ ಸದ್ಯ ಜಾರಿಯಲ್ಲಿ ಇರುವ ಲಾಕ್ ಡೌನ್ ಮುಗಿಯಲು ಇನ್ನು 7 ದಿನಗಳು ಬಾಕಿ ಇದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆ ಲಾಕ್ ಡೌನ್ ನಿಂದ ಮುಕ್ತಿ ಪಡೆಯಬೇಕಾದರೆ ಈ 7 ದಿನಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಮಾಡುವ ಸಲುವಾಗಿ ಜಿಲ್ಲೆ ಹೆಚ್ಚಿನ ಗಮನ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಜಿಲ್ಲಾಡಳಿತ ದೊಂದಿಗೆ ಕೈ ಜೋಡಿಸಿ ಕೋವಿಡ್ ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಸಹಕರಿಸಬೇಕಾಗಿದೆ.
ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಕ್ರಿಯಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ರೂಪಿಸುವ ಯೋಜನೆ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಇರುವ ಜಿಲ್ಲೆಗಳ ಪೈಕಿ ಹಾಸನ ನಂತರದ 2ನೇ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇರುವುದಾಗಿ ಜೂ.4ರಂದು ಕರ್ನಾಟಕ ರಾಜ್ಯ ಕೋವಿಡ್-19 ವಾರ್‌ರೂಮ್ ಬಿಡುಗಡೆಗೊಳಿಸಿದ ರಾಜ್ಯದ ದೈನಂದಿನ ಕೋವಿಡ್-19 ಪಾಸಿಟಿವ್ ಕೇಸ್‌ಗಳ ವಿಶ್ಲೇಷಣೆಯ ಅಂಕಿಅಂಶಗಳ ವರದಿಯಲ್ಲಿ ತಿಳಿಸಿದೆ.
ಅದರ ಪ್ರಕಾರ ಹಿಂದಿನ 14 ದಿನಗಳ ಒಟ್ಟು ಪಾಸಿಟಿವ್ ಪ್ರಕರಣಗಳನ್ನು ಪರಿಶೀಲಿಸಿದಾಗ ಉಡುಪಿ ಜಿಲ್ಲೆಯಲ್ಲಿ ನಗರ ಪ್ರದೇಶಗಳಿಗಿಂತ ಐದು ಪಟ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ. ಈ ಅವಧಿಯಲ್ಲಿ 1822 ಪಾಸಿಟಿವ್ ಪ್ರಕರಣಗಳು ನಗರ ಪ್ರದೇಶಗಳಲ್ಲಿ ಪತ್ತೆಯಾದರೆ, 8502 ಕೇಸುಗಳು ಗ್ರಾಮೀಣ ಪ್ರದೇಶಗಳಲ್ಲಿ ಪತ್ತೆಯಾಗಿದೆ.
ಈಗಾಗಲೇ ಮುಖ್ಯಮಂತ್ರಿಗಳ ಸಲಹೆಯಂತೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕೊಂಚ ಕಡಿಮೆಯಾಗಿದೆ. ಮೇ 25ರಿಂದ 31ರ ಅವಧಿಯಲ್ಲಿ 17.91 ರಷ್ಟಿದ್ದ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಮೇ 28ರಿಂದ ಜೂ.3ರ ವೇಳೆಗೆ 16.25ಕ್ಕೆ ಇಳಿದಿದೆ.
ಈ ನಡುವೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಂಭವಿಸುತ್ತಿರುವ ಮರಣ ಪ್ರಮಾಣವೂ ಕಡಿಮೆಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ ತುಂಬಾ ಕಡಿಮೆಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಾಗೂ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಒಟ್ಟಾರೆಯಾಗಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಮುಖವಾಗುತ್ತಿರುವುದು ಕಂಡು ಬಂದಿದೆ. ಈ ಎಲ್ಲಾ ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮುಖ್ಯಮಂತ್ರಿ ಹೇಳಿದಂತೆ ಲಾಕ್ ಡೌನ್ ನಿಂದ ವಿನಾಯಿತಿ ಪಡೆಯಲು ಜಿಲ್ಲೆ ವಿಶೇಷ ಪರಿಶ್ರಮ ವಹಿಸಿದ್ದಲ್ಲಿ ಮುಂದಿನ ಲಾಕ್ ಡೌನ್ ನಿಂದ ಜಿಲ್ಲೆ ವಿನಾಯಿತಿ ಪಡೆಯಬಹುದು. ಹಾಗೂ ಇದಕ್ಕಾಗಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿದೆ. | | |