ಬೆಂಗಳೂರು: ವಿಮಾನ ನಿಲ್ದಾಣ ಬಳಿ ಸ್ಫೋಟ- ಆರು ಮಂದಿಗೆ ಗಾಯ
ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಅವಿನಾಶ್, ಸಿರಾಜ್, ಪ್ರಶಾಂತ್, ಗೌತಮ್, ಅಜಯ್‌ಕುಮಾರ್ ಹಾಗೂ ನಾಗೇಶ್ ರಾವ್ ಗಾಯಗೊಂಡವರು. ಸಿರಾಜ್ ಹಾಗೂ ಅವಿನಾಶ್ ಅವರ ದೇಹದ ಶೇ 40ರಷ್ಟು ಭಾಗ ಸುಟ್ಟಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಐಎಎಲ್ ನ ಎರಡನೇ ಟರ್ಮಿನಲ್ ಗಾಗಿ ರಸ್ತೆ ನಿರ್ಮಾಣ ಕಾರ್ಯ ಬಲು ಜೋರಾಗಿ ಸಾಗಿದ್ದು, ಈ ವೇಳೆ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿ ನ ಅಂಡರ್ ಪಾಸ್ ಓಳಗೆ ರಸ್ತೆಗೆ ಕಪ್ಪು ಬಿಳಿ ಸೂಚಕ ಸಂಕೇತಗಳ ಪಟ್ಟಿಯನ್ನ ಬಳಿಯಕಾಗುತ್ತಿತ್ತು. ಇದಕ್ಕಾಗಿ ಕ್ಯಾಂಟರ್ ಒಂದರಲ್ಲಿ ಕಪ್ಪು ಬಳಿ ಬಣ್ಣವನ್ನ ಬಿಸಿ ಮಾಡುವ ಸಿಲಿಂಡರ್ ಇಟ್ಟಿದ್ದು ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟ ಆಗಿದೆ.
‘ಭಾನುವಾರ ಕೆಲಸಕ್ಕೆ ಹಾಜರಾಗಿದ್ದ ಕೆಲಸಗಾರರು, ಕೆಳ ಸೇತುವೆಯಲ್ಲಿ ಸೇರಿದ್ದರು. ರಸ್ತೆಗೆ ಬಳಿಯಬೇಕಾದ ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಇದೇ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಕ್ಷಣಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಕೆಳ ಸೇತುವೆ ಆವರಿಸಿತ್ತು’ ಎಂದು ಮೂಲಗಳು ಹೇಳಿವೆ.
‘ಬೆಂಕಿ ಹಾಗೂ ಕೆಲಸಗಾರರ ಚೀರಾಟ ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದರು. ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ, ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು ಎಂದು ತಿಳಿದು ಬಂದಿದೆ.
ಎರಡನೇ ಟರ್ಮಿನಲ್ ಕಾಮಗಾರಿ ಆರಂಭವಾಗಿ 3–4 ವರ್ಷವಾಗಿದ್ದು, ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ.