ಗ್ರಾ.ಪಂ.ಅಧ್ಯಕ್ಷನಿಂದಲೇ ಕೊಲೆ- ಇದುವೇ ಬಿಜೆಪಿಯ ಸಂಸ್ಕೃತಿ: ಗೋಪಾಲ ಪೂಜಾರಿ
ಬೈಂದೂರು: ಸಾಮಾಜಿಕ ಕಾರ್ಯಕರ್ತ ಯಡಮೊಗೆಯ ಉದಯ ಗಾಣಿಗ ಕೊಲೆ ಪೂರ್ವಯೋಜಿತ ಸಂಚಾಗಿದ್ದು, ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಮಾತ್ರವಲ್ಲದೆ ಇದರಲ್ಲಿ ಇನ್ನಷ್ಟು ಪ್ರಭಾವಿ ಮುಖಂಡರಿದ್ದು, ಈ ಕೃತ್ಯದಲ್ಲಿ ಭಾಗಿಯಾ ದವರನ್ನು ತಕ್ಷಣ ಬಂಧಿಸಬೇಕೆಂದು ಮಾಜಿ ಶಾಸಕ ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ.
ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಸಹಕರಿಸಿದ ಎಲ್ಲರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು, ಕಟ್‌ಬೆಲ್ತೂರಿ ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ.ಅಧ್ಯಕ್ಷರೇ ಕೊಲೆ ಮಾಡಿರುವುದು ಅಕ್ಷಮ್ಯ. ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತಿದೆ.
ಶಾಸಕರು ಸಹ ಇಂತಹ ವಿಚಾರಗಳಿಗೆ ಕುಮ್ಮಕ್ಕು ನೀಡುತ್ತಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ. ಗ್ರಾ.ಪಂ. ಟಾಸ್ಕ್‌ಫೋರ್ಸ್ ಹೆಸರಲ್ಲಿ ಬಿಜೆಪಿ ಪಕ್ಷದ ಮುಖಂಡರು, ಸದಸ್ಯರು ದಬ್ಬಾಳಿಕೆ ನಡೆಸುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಭಾರೀ ತೊಂದರೆಯಾಗುತ್ತಿದೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದವರು ಹೇಳಿದರು.