ದಲಿತರು ಉದ್ದಾರ ಆಗಬಾರದೆಂಬ ಏಕೈಕ ಕಾರಣಕ್ಕಾಗಿ ಗೂಡಂಗಡಿ ಧ್ವಂಸ: ಸುಂದರ್ ಮಾಸ್ತರ್
ಉಡುಪಿ ಜೂ.6(ಉಡುಪಿ ಟೈಮ್ಸ್ ವರದಿ): ನಗರದ ಬ್ರಹ್ಮಗಿರಿಯಲ್ಲಿರುವ ಮಹಿಳೆಯ ಮೀನು ಮಾರಾಟದ ಗೂಡಂಗಡಿ ಯನ್ನು ತೆರವು ಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಮೀನು ಮಾರಾಟ ಮಹಿಳೆ ರಾಧಾ ಅವರು ನೀಡಿರುವ ದೂರಿನ ಪ್ರಕಾರ, ಕಾಡಬೆಟ್ಟುವಿನ ದಲಿತ ಮಹಿಳೆ ರಾಧಾ, ಅಶೋಕ್ ರಾಜ್ ಬ್ರಹ್ಮಗಿರಿ ಸರ್ಕಲ್ ಬಳಿ ತಗಡಿನ ಶೀಟ್ ಅಂಗಡಿಯಲ್ಲಿ ಒಂದು ತಿಂಗಳಿನಿಂದ ಮೀನು ಮಾರಾಟವನ್ನು ನಡೆಸಿ ಕೊಂಡಿದ್ದರು. ಜೂ.5ರಂದು ಬೆಳಗಿನ ಜಾವ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ರಾಧಾ ಅವರನ್ನುದ್ದೇಶಿಸಿ ಜಾತಿ ನಿಂದನೆ ಮಾಡಿ, ಅವಮಾನಿಸಿದ್ದಾರೆಂದು ದೂರಲಾಗಿದೆ. ಅಲ್ಲದೆ ಜೆಸಿಬಿಯಿಂದ ಅಂಗಡಿಯನ್ನು ಕೆಡವಲು ಯತ್ನಿಸಿ, ಅಂಗಡಿಯ ಹಿಂಭಾಗಕ್ಕೆ ಹಾನಿ ಮಾಡಿ ಮುಂದಕ್ಕೆ ನೋಡಿ ಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ದಾಖಲಾಗಿರುವ ಪ್ರತಿ ದೂರಿನಲ್ಲಿ, ಅನಧಿಕೃತವಾಗಿ ಗೂಡಂಗಡಿ ಸ್ಥಾಪಿಸಿ ಮೀನಿನ ವ್ಯಾಪಾರ ಮಾಡುತ್ತಿರುವ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಪೊಲೀಸರ ಉಪಸ್ಥಿತಿಯಲ್ಲಿ ಗೂಡಂಗಡಿಯ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಕಾಡಬೆಟ್ಟು ನಿವಾಸಿಗಳಾದ ರಾಧಾ, ಅಶೋಕ್, ಪ್ರಮೋದಾ ಹಾಗೂ ಸುಹೈಲ್ ಮತ್ತು ಇತರರು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವು ದಾಗಿ ದೂರಲಾಗಿದೆ. ಅಲ್ಲದೇ ಇವರು ತೆರವು ಕಾರ್ಯಾಚರಣೆಯ ಲ್ಲಿ ಭಾಗವಹಿಸಿದ ಆರೋಗ್ಯ ನಿರೀಕ್ಷಕರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯನ್ನು ದಲಿತ ಸಂಘರ್ಷ ಸಮಿತಿ ಖಂಡಿಸಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಸುಂದರ ಮಾಸ್ಟರ್ ಅವರ ನೇತೃತ್ವದ ನಿಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕರೊಂದಿಗೆ ಚರ್ಚೆ ನಡೆಸಿತು. ಈ ವೇಳೆ ಸುಂದರ್ ಮಾಸ್ತರ್ ಅವರು ಪ್ರತಿಕ್ರಿಯೆ ನೀಡಿ, ದಲಿತ ಮಹಿಳೆ ರಾಧಾ ಅವರು ಲಾಕ್‌ಡೌನ್ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಮೀನು ಮಾರಾಟ ಸಹಕಾರ ಸಂಘದಿಂದ ಸದಸ್ಯತ್ವ ಪಡೆದು ಮೀನು ಮಾರಾಟ ಮಾಡುತ್ತಿದ್ದರು.
ನಗರಸಭೆ ವ್ಯಾಪ್ತಿಯಲ್ಲಿ ನೂರಾರು ಅನಧಿಕೃತ ಗೂಡಂಗಡಿಗಳಿದ್ದರೂ ಅವುಗಳಿಗೆ ಯಾವುದೇ ತಡೆಯೊಡ್ಡದೆ ದಲಿತರು ಉದ್ದಾರ ಆಗಬಾರದೆಂಬ ಏಕೈಕ ಕಾರಣಕ್ಕಾಗಿ ನೋಟಿಸ್ ನೀಡದೆ ಗೂಡಂಗಡಿಯನ್ನು ಧ್ವಂಸ ಮಾಡಲು ಜೆಸಿಬಿ ತಂದು ಎಳೆದಾಡಿರುವುದು ಖಂಡನೀಯ ಎಂದು ಅವರು ದೂರಿದ್ದಾರೆ.
ಇದೇ ವೇಳೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ದಲಿತರಿಗೆ ಸೂಕ್ತ ರಕ್ಷಣೆ ಕೊಟ್ಟು ದಲಿತರು ಸಹ ಹೊಟ್ಟೆ ಪಾಡಿಗೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಲು ಅನುವು ಮಾಡಿಕೊಡಬೇಕು. ಅಂತೆಯೇ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಗ್ಯಾಧಿಕಾರಿ ಕರುಣಾಕರ ಅವರನ್ನು ಈ ಕೂಡಲೇ ಅಮಾನತುಗೊಳಿಸಿ ಬಂಧಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ್ ಬಾಳ್ಕುದ್ರು, ಶ್ರೀಧರ ಕುಂಜಿಬೆಟ್ಟು, ಶ್ರೀಪತಿ, ಅಣ್ಣಪ್ಪ ಕೊಲಳಗಿರಿ, ಪುರಂದರ ಕುಂದರ್ ಬಿರ್ತಿ, ಸಂಜೀವ ಬಳ್ಕೂರು ಉಪಸ್ಥಿತರಿದ್ದರು.