ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್, ಇತರೆ ವಿದ್ಯಾರ್ಥಿ, ಸಿಬ್ಬಂದಿಗೆ ಸಂಕಷ್ಟ

ಹಾಸನ: ಕೊರೋನಾ ಭೀತಿಯ ನಡುವೆಯೂ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಶಿಕ್ಷಣ ಇಲಾಖೆ ಎಷ್ಟೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೂ ಪೋಷಕರ ನಿರ್ಲಕ್ಷ್ಯದಿಂದಾಗಿ ಸೋಂಕಿತ ವಿದ್ಯಾರ್ಥಿಯೊಬ್ಬ ಶನಿವಾರ ಪರೀಕ್ಷೆ ಬರೆದಿದ್ದು, ಆತನ ಜತೆಗೆ ಪರೀಕ್ಷೆ ಬರೆದ ಇತರೆ 17 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂದು ಅರಕಲಗೂಡು ಮಲ್ಲಿಪಟ್ಣಣ ಸರ್ಕಾರ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 16 ವರ್ಷದ ವಿದ್ಯಾರ್ಥಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. 

ಈ ವಿದ್ಯಾರ್ಥಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರಿಂದ ಅರಕಲಗೂಡು ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದೇ ವೇಳೆ ವಿದ್ಯಾರ್ಥಿಯ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು, ಪಾಸಿಟಿವ್ ದೃಢಪಟ್ಟಿದೆ. ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಯನ್ನು ಹಾಸನದ ಕೊವಿಡ್-19 ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಂದು ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನ್ ಮಾಡಿದಾಗ ನಾರ್ಮಲ್ ಬಂದಿದೆ. ಹೀಗಾಗಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಪೋಷಕರು ಮಗನಿಗೆ ಡೆಂಗ್ಯೂ ಜ್ವರ ಇದ್ದರೂ ಪರೀಕ್ಷೆ ಬರೆಯಲು ಕಳುಹಿಸುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದ್ದಾರೆ.

ವಿದ್ಯಾರ್ಥಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ವಿಷಯಗಳ ಪರೀಕ್ಷೆಯನ್ನು ಪೂರಕ ಪರೀಕ್ಷೆ ವೇಳೆ ಬರೆಯಬಹುದು ಎಂದು ಜಿಲ್ಲಾಧಿಕಾರಿ ಗಿರಿಶ್ ಅವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!