ಉಡುಪಿ, ಜೂ.6 (ಉಡುಪಿ ಟೈಮ್ಸ್ ವರದಿ): ಕೆಲ ದಿನಗಳ ದಿಂದೆ ಉಡುಪಿಯ ಪುತ್ತೂರಿನ ರಾಜೀವ ನಗರದಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶ್ಯಾಮ್ ಹಲ್ಲೆಗೊಳಗಾದ ವ್ಯಕ್ತಿ. ಚರಣ್, ಪುನೀತ್, ಮುಹಮ್ಮದ್ ಫರ್ವೆಝ್, ಅಭಿಜೀತ್, ಶ್ಯಾನ್ವಾಝ್ ಮತ್ತು ರತನ್ ಬಂಧಿತ ಆರೋಪಿಗಳು.
ಈ ಪೈಕಿ ಜೂ.4ರಂದು ಆರೋಪಿಗಳಾದ ಚರಣ್, ಪುನೀತ್, ಮುಹಮ್ಮದ್ ಫರ್ವೆಝ್, ಅಭಿಜೀತ್ ನನ್ನು ಉಡುಪಿ ರಾಜಾಂಗಣದ ಪಾರ್ಕಿಂಗ್ ಬಳಿಯ ವಸತಿಗೃಹದಲ್ಲಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿ ಚರಣ್ ನೀಡಿದ ಮಾಹಿತಿಯಂತೆ ಇತರ ಆರೋಪಿಗಳಾದ ಶ್ಯಾನ್ವಾಝ್ ಮತ್ತು ರತನ್ ನನ್ನು ಪೊಲೀಸರು ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿ, ಲಾಕ್ಡೌನ್ ನಿಮಯ ಉಲ್ಲಂಘಿಸಿ ಆರೋಪಿಗಳಿಗೆ ರೂಮ್ ನೀಡಿರುವ ವಸತಿಗೃಹದ ಮ್ಯಾನೇಜರ್ ಸುರೇಶ್ ಶೆಟ್ಟಿಗಾರ್ ಮತ್ತು ವಸತಿ ಗೃಹದ ಮಾಲಕರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಇನ್ನೋರ್ವ ಆರೋಪಿ ಕಿಶೋರ್ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಬಂಧಿತರಿಂದ ಒಂದು ಕತ್ತಿ, ಒಂದು ತಲವಾರ್, ಮೂರು ದ್ಚಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಬಂಧಿತ ಆರೋಪಿಗಳ ಪೈಕಿ ಚರಣ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಮತ್ತು ದಲಿತ ದೌರ್ಜನ್ಯ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣಗಳು ದಾಖಲಾಗಿವೆ. ಪುನೀತ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ, ಸೆನ್ ಪೊಲೀಸ್ ಠಾಣೆಯಲ್ಲಿ ಹಾಗೂ ಮಣಿಪಾಲ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಅಪರಾಧ ಶಾಖೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ವೈಲೆಟ್ ಫೇಮಿನಾ, ಎಎಸೈ ವಿಜಯ್, ಸಿಬ್ಬಂದಿ ಜೀವನ್, ರಾಜೇಶ್, ಮನೋಹರ್, ಚೇತನ್, ರಿಯಾಝ್ ಮತ್ತು ವಿಶ್ವನಾಥ ಭಾಗವಹಿಸಿದ್ದರು.
ಮೇ 23ರಂದು ರಾತ್ರಿ ಶ್ಯಾಮ್ ತನ್ನ ಸ್ನೇಹಿತರೊಂದಿಗೆ ಪುತ್ತೂರು ಗ್ರಾಮದ ರಾಜೀವ ನಗರದಲ್ಲಿರುವ ಬಾವಿಕಟ್ಟೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ, ಅಲ್ಲಿಗೆ ಬಂದ ಆರೋಪಿಗಳು ಪೂರ್ವದ್ವೇಷದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಶ್ಯಾಮ್ ಅವರಿಗೆ ಏಕಾಏಕಿಯಾಗಿ ತಲ್ವಾರ್ ಮತ್ತು ಇತರ ಆಯುಧಗಳಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. | | |