ಕಾರ್ಕಳ ಶಾಸಕರಿಗೆ ಒಂದು ನ್ಯಾಯ – ಬಡ ಜನತೆಗೆ ಒಂದು ನ್ಯಾಯವೇ…?- ಶುಭದ ರಾವ್

ಕಾರ್ಕಳ ಜೂ.5 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಾದ್ಯಂತ ಕೋವಿಡ್ ಲಾಕ್ ಡೌನ್ ಜಾರಿಯಲ್ಲಿರುವಾಗ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ನಿಮಯ ಉಲ್ಲಂಘಿಸಿ ಸಾರ್ವಜನಿಕ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಕಾರ್ಕಳ ಪುರಸಭೆ ಸದಸ್ಯ ಶುಭದ್ ರಾವ್ ಆರೋಪಿಸಿದ್ದಾರೆ.

ಇತ್ತೀಚೆಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ನಗರದಲ್ಲಿ ನಡೆಸಿದ ಬೆಂಡೆ ಬೀಜ ವಿತರಣಾ ಕಾರ್ಯಕ್ರಮ ಹಾಗೂ ಕಚೇರಿಯಲ್ಲಿ ನಡೆಸಿದ ಕಾರ್ಯಕ್ರಮದ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ಅಲ್ಲದೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

ಇದೀಗ ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಕಳ ಪುರ ಸಭೆ ಸದಸ್ಯ ಸುಬದ್ ರಾವ್ ಅವರು, ಕಳೆದ ಒಂದುವರೇ ತಿಂಗಳಿನಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ದರಿಂದ ಅಂಗಡಿ ಮುಂಗಟ್ಟುಗಳ ಕಾರ್ಯ ಚಟುವಟಿಕೆ ಸ್ಥಬ್ದವಾಗಿದ್ದು ಜನರ ಬದುಕಿನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅಲ್ಲದೆ ಇತ್ತೀಚಿಗೆ ಕಾರ್ಕಳ ಮತ್ತು ಹೆಬ್ರಿಯಲ್ಲಿ 12 ಗ್ರಾಮಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಇದರಿಂದ ಸಾರ್ವಜನಿಕರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಿರುವಾಗ ಕಾರ್ಕಳ ಶಾಸಕರು ಗ್ರಾಮ ಪಂಚಾಯತ್ ಗಳಲ್ಲಿ ಬೆಂಡೆ ಬೀಜದ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂದು ಕೇಳಿದ್ದಾರೆ. ಇದೇ ವೇಳೆ, ಉಡುಪಿ ಜಿಲ್ಲೆಗೆ ಒಂದು ನ್ಯಾಯ, ಕಾರ್ಕಳದ ಬಡ ಜನರಿಗೆ ಒಂದು ನ್ಯಾಯವಾದರೆ ಕಾರ್ಕಳದ ಶಾಸಕರಿಗೆ ಒಂದು ನ್ಯಾಯವೇ ಎಂದು ಜಿಲ್ಲಾಧಿಕಾರಿಯವರಿಗೆ  ಪ್ರಶ್ನಿಸಿದ್ದಾರೆ.

 ಈ ಬಗ್ಗೆ ಮಾತು ಮುಂದುವರೆಸಿದ ಅವರು, ತಾಲೂಕಿನ ಶಾಸಕರಾದ ಅವರು ಸೀಲ್ಡೌನ್ ಆಗಿರುವ ಗ್ರಾಮ ಪಂಚಾಯತ್ ಗಳಲ್ಲಿ ಜನರ ಸಮಸ್ಯೆ ಆಲಿಸುವ ಬದಲು,ಆ ಎಲ್ಲಾ ಪಂಚಾಯತ್’ಗಳಿಗೆ ಭೆಟಿ ನೀಡಿ ಬೆಂಡೆ ಬೀಜ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಅಲ್ಲದೆ  ನೂರಾರು ಜನರನ್ನು ಸೇರಿಸಿ ಬೀಜ ಹಂಚುತ್ತಿದ್ದಾರೆ.ಇದು ಎಷ್ಟರ ಮಟ್ಟಿಗೆ ಸರಿ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡುವುದರಿಂದ ಕೊರೋನಾ ಹರಡುವುದಿಲ್ಲವೇ. 

ಇಲ್ಲಿ ಶಾಸಕರಿಗೊಂದು ನ್ಯಾಯ, ಜನರಿಗೊಂದು ನ್ಯಾಯವೇ ಎಂದು ಕೇಳಿದ್ದಾರೆ. ತಾಲೂಕಿನಲ್ಲಿ ಜನರು ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಇದು ಶಾಸಕರ ಗಮನಕ್ಕೆ ಬರುತ್ತಿಲ್ಲವೇ ಎಂದು ಕೇಳಿರುವ ಅವರು, ಶಾಸಕರ ಬೆಂಡೆ ಬೀಜದ ವಿತರಣೆ ಕಾರ್ಯಕ್ರಮಕ್ಕೆ ನಮ್ಮ ಆಕ್ಷೇಪವಿಲ್ಲ.ಈ ಕಾರ್ಯಕ್ರಮದ ಅಂಗವಾಗಿ ಶಾಸಕರು ಕಾರ್ಯಕರ್ತರ ಮೂಲಕ ಮನೆ ಮನೆಗೆ ಹೋಗಿ ಬೆಂಡೆಬೀಜ ವಿತರಿಸಲಿ ಅದು ಬಿಟ್ಟು ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡುವುದರಿಂದ ಕೊರೋನಾಹರಡುವುದಿಲ್ಲವೇ ?. ಆದ್ದರಿಂದ ಜಿಲ್ಲಾಧಿಕಾರಿಯವರು ತಕ್ಷಣ ಈ ಬೆಂಡೆ ಬೀಜ ವಿತರಣೆಯ ಸಾರ್ವಜನಿಕ ಕಾರ್ಯಕ್ರಮವನ್ನು ನಿಲ್ಲಿಸಬೇಕು ಹಾಗೂ ಕಾರ್ಯಕ್ರಮದ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!