ಕುಂದಾಪುರ: ಲಾಕ್ ಡೌನ್ ಬಗ್ಗೆ ಸ್ಟೇಟಸ್ ಹಾಕಿದ್ದ ವ್ಯಕ್ತಿಯ ಸಂಶಯಾಸ್ಪದ ಸಾವು
ಉಡುಪಿ: (ಉಡುಪಿ ಟೈಮ್ಸ್ ವರದಿ) ಲಾಕ್ ಡೌನ್ ಮಾಡಿದ ಗ್ರಾಮಕ್ಕೆ ಯಾವುದೇ ಅಗತ್ಯ ವಸ್ತುಗಳನ್ನು ನೀಡದೆ ಗ್ರಾಮಕ್ಕೆ ಬೇಲಿ ಹಾಕಿರುವುದನ್ನು ವಿರೋಧಿಸಿದ ವ್ಯಕ್ತಿಯ ಸಂಶಯಾಸ್ಪದ ಸಾವು ಶನಿವಾರ ರಾತ್ರಿ ಬೈಂದೂರು ತಾಲೂಕಿನ ಯಡಮೊಗೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಉದಯ ಗಾಣಿಗ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತ್ ಲಾಕ್ಡೌನ್ ಬಗ್ಗೆ ಸ್ಟೇಟಸ್ ಹಾಕಿದ್ದ ಉದಯ ಗಾಣಿಗ ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ ಕೊರೋನಾ ಪೀಡಿತ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಆಮೇಲೆ ಪ್ರಚಾರ ತಗೊಳ್ಳಿ ಸರಕಾರ ಸಹಾಯ ಧನ ನುಂಗಬೇಡಿ ಎಂದು ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ.
ಶನಿವಾರ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗ ಮೇಲೆ ಕಾರು ಢಿಕ್ಕಿ ಹೊಡೆಸಿ ಹತ್ಯೆ ಮಾಡಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ನಂತರ ಕಾರು ಬಿಟ್ಟು ಓಡಿ ಹೋದ ಬಗ್ಗೆ ಸಾಧ್ಯತೆ ಇದೆ ಎನ್ನಲಾಗಿದೆ. ಸಾರ್ವಜನಿಕರು 108 ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯುವ ಮಾರ್ಗ ಮಧ್ಯೆ ಉದಯ ಗಾಣಿಗ ಸಾವು ಸಂಭವಿಸಿದೆಂದು ತಿಳಿದು ಬಂದಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.