ಹೆಬ್ರಿ : ಮಲ್ಪೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ 350 ಕೋಟಿ ರೂಪಾಯಿ ಮಂಜೂರುಗೊಂಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದು ಅದರಲ್ಲಿ ಮೊದಲು ಆಗುಂಬೆ ಘಾಟಿಯ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಎಂದು ಉಡುಪಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕಾರ್ಕಳದ ಮಾಜಿ ಶಾಸಕರಾಗಿದ್ದ ಗೋಪಾಲ ಭಂಡಾರಿ ಮತ್ತು ಮಾಜಿ ಸಚಿವ ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಅವರ ವಿಶೇಷ ಮನವಿಯ ಮೇರೆಗೆ 2013ರಲ್ಲಿ ಅಂದಿನ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಿಗಳಾಗಿದ್ದ ಡಾ| ಎಂ. ವೀರಪ್ಪ ಮೊಯಿಲಿಯವರು ಆಗುಂಬೆ ಘಾಟಿಯ 40 ಮೀ ಅಗಲದ ರಾಷ್ಟ್ರೀಯ ಹೆದ್ದಾರಿಯನ್ನು ಅಂದಿನ ಹೆದ್ದಾರಿ ಮತ್ತು ಭೂ ಸಾರಿಗೆ ಮಂತ್ರಿ ಓಸ್ಕರ್ ಫೆರ್ನಾಂಡಿಸ್ ಮಲ್ಪೆ – ತೀರ್ಥಹಳ್ಳಿ ರಾಜ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಂಜೂರು ಗೊಳಿಸಿದ್ದರು.
ಅಂದು ಮೊದಲಿಗೆ ಆಗುಂಬೆ ಘಾಟಿಯನ್ನು ವಿಸ್ತರಣೆಗೊಳಿಸಿ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಆರಂಭಿಸುವುದು ಎಂದು ತೀರ್ಮಾನವಾಗಿತ್ತು. ಅನಂತರ ಮಲ್ಪೆ – ತೀರ್ಥಹಳ್ಳಿ ಎರಡೂ ಕಡೆಯಿಂದ ಕಾಮಗಾರಿ ಆರಂಭಿಸುವುದು ಎಂದು ಮಾತುಕತೆಯೂ ನಡೆದಿತ್ತು ಎಂದು ಹೇಳಿರುವ ಕೃಷ್ಣ ಶೆಟ್ಟಿ ಅಪ್ರಕಾರ ಉಡುಪಿಯಿಂದ ಮಲ್ಪೆವರೆಗೆ ಚತುಷ್ಪತವಾಗಿ ರಸ್ತೆ ಅಭಿವೃದ್ಧಿಗೆ 350 ಕೋ.ರೂ ಅಯವ್ಯಯದಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಸಂತಸ ವಿಚಾರ ಎಂದು ತಿಳಿಸಿದ್ದಾರೆ.
ಆಗುಂಬೆ ಘಾಟಿ ಮೊದಲು ಅಭಿವೃದ್ಧಿಗೊಂಡಲ್ಲಿ ಹೆಬ್ರಿ ಕುಂದಾಪುರ, ಕಾರ್ಕಳ ಮತ್ತು ಉಡುಪಿ ಕಡೆಯಿಂದ ಹೆಚ್ಚಿನ ದೊಡ್ಡ ವಾಹನಗಳು ಬಸ್ಸುಗಳು, ಶಿವಮೊಗ್ಗ, ಬೆಂಗಳೂರಿಗೆ ಅಗುಂಬೆ ಘಾಟಿ ಮೂಲಕ ಹಗಲು ರಾತ್ರಿ ಸಂಚರಿಸಲು ಸಹಾಯವಾಗುತ್ತದೆ. ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆ ಸಂಸದರು, ಆದಷ್ಟು ಬೇಗ ಆಗುಂಬೆ ಘಾಟಿ ರಸ್ತೆ ವಿಸ್ತರಣೆಯ ಕಾಮಗಾರಿಯನ್ನು ಅರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ. | | |