ಗ್ರಾಮ ಪಂಚಾಯತ್ ಸಂಪೂರ್ಣ ಲಾಕ್ ಡೌನ್: ಅಗತ್ಯ ಸಾಮಾಗ್ರಿಗಳ ಖರೀದಿಗೆ ಎರಡು ದಿನ ಅವಕಾಶ
ಉಡುಪಿ ಜೂ.5(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿರುವ ಗ್ರಾಮ ಪಂಚಾಯತ್ ಗಳ ಸಾರ್ವಜನಿಕರಿಗೆ ಜೂ.7 ಮತ್ತು ಜೂ.8 ರಂದು ಅಗತ್ಯ ಸಾಮಾಗ್ರಿಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಸಮಯಾವಕಾಶ ನೀಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಆದೇಶ ಹೊರಡಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, 50 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಸುಮಾರು 40 ಗ್ರಾಮ ಪಂಚಾಯತ್‌ಗಳನ್ನು ಈಗಾಗಲೇ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.
ಈ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಜೂ 7 ಮತ್ತು ಜೂ.8 ರಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ತಮಗೆ ಅಗತ್ಯವಾಗಿ ಬೇಕಾಗಿರುವ ಆಹಾರ ಸಾಮಾಗ್ರಿಗಳನ್ನು ಖರೀದಿ ಮಾಡಲು ಅನುಕೂಲವಾಗುವಂತೆ ವಿನಾಯಿತಿ ನೀಡಲಾಗಿದೆ. ಇನ್ನು ಈ ಗ್ರಾಮ ಪಂಚಾಯತ್‌ಗಳಲ್ಲಿ ಲಾಕ್ ಡೌನ್‌ನ್ನು ಮುಂದುವರೆಸುವುದೇ ಅಥವಾ ಬೇಡವೇ ಎಂಬ ಬಗ್ಗೆ ಜೂ.8 ರಂದು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.