| ದ.ಕ ಜೂ.5(ಉಡುಪಿ ಟೈಮ್ಸ್ ವರದಿ): ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ರನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ತಾತ್ಕಾಲಿಕ ತೆರೆ ಸಿಕ್ಕಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದ ಖಾಸಗಿ ಆಸ್ಪತ್ರೆಯ ಅಧಿಕಾರಿ ದೂರು ಹಿಂಪಡೆಯುವುದಾಗಿ ನೀಡಿದ ದಿಢೀರ್ ಹೇಳಿಕೆಯಿಂದಾಗಿ ಸುಹೈಲ್ ಕಂದಕ್ ರನ್ನು ಪೊಲೀಸರು ಬಿಡುಗಡೆ ಗೊಳಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.
ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಚಿಕಿತ್ಸೆಯ ಬಿಲ್ ಪಾವತಿಸದೇ ನೀಡುವುದಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥರೊಬ್ಬರು ಹೇಳಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ನೇರ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಮುಖ್ಯಸ್ಥರ ಜೊತೆ ಮಾತನಾಡಿ ಚಿಕಿತ್ಸೆಯ ಬಿಲ್ ಪಾವತಿಸದೆ ಮೃತದೇಹವನ್ನು ವಾರಸುದಾರರಿಗೆ ಬಿಟ್ಟು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಕೂಡಾ ಆಗಿತ್ತು.ಈ ನಡುವೆ, ಮೇ 18ರಂದು ಆಸ್ಪತ್ರೆಯ ಅಧಿಕಾರಿ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಸುಹೈಲ್ ಕಂದಕ್ರನ್ನು ಠಾಣೆಗೆ ಕರೆಯಿಸಿಕೊಂಡು ಹೇಳಿಕೆ ಪಡೆದು ಬಿಟ್ಟಿದ್ದರು. ಇದೆಲ್ಲದರ ನಡುವೆ ನಗರದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಕೋವಿಡ್ ಸೋಂಕಿತೆ ಗರ್ಭಿಣಿಯೊಬ್ಬರಿಗೆ ಸರಕಾರಿ ಮತ್ತು ಕೆಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎಂದು ಆರೋಪಿಸಿ ವೈದ್ಯರೊಬ್ಬರಿಗೆ ಗರ್ಭಿಣಿಯ ಕಡೆ ಯವರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದಾದ ಬಳಿಕ ಸ್ವತಃ ಗರ್ಭಿಣಿಯು ಜೂ.3 ರಂದು ಸುದ್ದಿಗೋಷ್ಠಿ ನಡೆಸಿ ಕೆಲವು ವೈದ್ಯರು ಮತ್ತು ಆಸ್ಪತ್ರೆಗಳಿಂದ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಜೂ.4 ರಂದು ನಗರದ ಐಎಂಎ ಹಾಲ್ನಲ್ಲಿ ವೈದ್ಯರು ಕೂಡ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ಅಲ್ಲದೆ ಖಾಸಗಿ ಆಸ್ಪತ್ರೆಯ ಮುಖ್ಯಸ್ಥ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ಕೆಲವು ದಿನಗಳ ಹಿಂದೆ ನಮ್ಮಲ್ಲೂ ಇಂತಹ ಒಂದು ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಪೊಲೀಸ್ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಆಸ್ಪತ್ರೆಯ ದಾದಿಯೊಬ್ಬರು ಜೂ.4 ರಂದು ನೀಡಿದ ದೂರಿನ ಮೇರೆಗೆ ಸುಹೈಲ್ ಕಂದಕ್ ರನ್ನು ವಶಕ್ಕೆ ಪಡೆದು ಪೊಲೀಸರು ಬಂಧನ ಪ್ರಕ್ರಿಯೆ ನಡೆಸಿದ್ದರು.
ವಿಷಯ ತಿಳಿದ ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಬಿ ಹ್ಯೂಮನ್ ಸಂಘಟನೆಯ ಮುಖಂಡ ಆಸೀಫ್ ಡೀಲ್ಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ‘ಒಂದೋ ನಮ್ಮೆನ್ನೆಲ್ಲಾ ಬಂಧಿಸಿ, ಇಲ್ಲವೇ ಸುಹೈಲ್ರನ್ನು ಬಿಡುಗಡೆ ಮಾಡಿ’ ಎಂದು ಒತ್ತಾಯಿಸಿದರು. ಈ ನಡುವೆ ಸಂಜೆಯ ವೇಳೆಗೆ ಸುಹೈಲ್ ಕಂದಕ್ ವಿರುದ್ಧ ದೂರು ನೀಡಿರುವ ದಾದಿ ಸದ್ಯ ನಮ್ಮ ಆಸ್ಪತ್ರೆಯಲ್ಲಿಲ್ಲ. ಅವರು ಬಂದ ಬಳಿಕ ಮುಂದಿನ ತೀರ್ಮಾನ ಮಾಡುವೆವು. ಸುಹೈಲ್ ಕಂದಕ್ ವಿರುದ್ಧ ಈ ಹಿಂದೆ ನೀಡಿದ ದೂರನ್ನು ಹಿಂಪಡೆಯುವುದಾಗಿ ಆಸ್ಪತ್ರೆಯ ಮುಖ್ಯಸ್ಥರು ಹೇಳಿಕೆ ನೀಡಿದ್ದು, ಬಳಿಕ ಪೊಲೀಸರ ವಶದಲ್ಲಿದ್ದ ಸುಹೈಲ್ ಕಂದಕ್ ರನ್ನು ಬಿಡುಗಡೆ ಮಾಡಲಾಗಿದೆ.
ಈ ವಿಚಾರವಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾಹಿತಿ ನೀಡಿ, ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ನೀಡಿದ್ದ ಹೇಳಿಕೆಯ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ. ದೂರು ನೀಡಿದ ನರ್ಸ್ ಸದ್ಯ ನಮ್ಮಲ್ಲಿಲ್ಲ. ಈ ಹಿಂದಿನ ದೂರನ್ನು ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಹಾಗಾಗಿ ಬಂಧನ ಪ್ರಕ್ರಿಯೆ ಆಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಪ್ರತಿಕ್ರಿಯೆ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆಯ ಬಿಲ್ ದಂಧೆಯ ಬಗ್ಗೆ ಧ್ವನಿ ಎತ್ತಿರುವ ಸುಹೈಲ್ ಕಂದಕ್ರನ್ನು ಪೊಲೀಸರು ವಶಕ್ಕೆ ಪಡೆದದ್ದು ಖಂಡನೀಯ. ಸುಮಾರು 2 ವಾರಗಳ ಹಿಂದಿನ ಘಟನೆ ಮಾತುಕತೆ ಮೂಲಕ ಇತ್ಯರ್ಥಗೊಂಡಿದ್ದರೂ ಸುಹೈಲ್ ರನ್ನು ಈಗ ವಶಕ್ಕೆ ಪಡೆದದ್ದು ಯಾಕ್ಕೆ ? ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ತರಾತುರಿಯ ಕ್ರಮ ಕೈಗೊಂಡಿತೇ ? ಕೋವಿಡ್ ಸೋಂಕಿತ ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಬಗ್ಗೆ ಸ್ವತಃ ಗರ್ಭಿಣಿ ದೂರು ನೀಡಿದ್ದರೂ ಪೊಲೀಸ್ ಇಲಾಖೆಯು ಅದನ್ನು ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು, ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ಮಾಡುವಾಗ ಇಂತಹ ಕೆಲವು ಪ್ರಸಂಗಗಳು ಎದು ರಾಗುತ್ತವೆ. ತಪ್ಪು ಗ್ರಹಿಕೆಯಿಂದ ಎರಡೂ ಕಡೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಎಲ್ಲದ್ದಕ್ಕೂ ಪೊಲೀಸ್ ಪ್ರಕರಣ ಪರಿಹಾರವಲ್ಲ.
ಇದೀಗ ಗೊಂದಲ ನಿವಾರಣೆಯಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ಕಂದಕ್ ಅವರು ಪ್ರತಿಕ್ರಿಯೆ ನೀಡಿ, ಕೆಲವು ವರ್ಷಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ದಂಧೆ ನಡೆಯುತ್ತಿದೆ. ಕೋವಿಡ್ ಬಳಿಕವಂತೂ ಈ ದಂಧೆ ಹೆಚ್ಚಾಗ ತೊಡಗಿತ್ತು. ಕೋವಿಡ್ ಸೇವೆಯಲ್ಲಿ ಸಕ್ರಿಯನಾಗಿರುವ ನಾನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವೆ. ಅದರಲ್ಲೂ ಖಾಸಗಿ ಆಸ್ಪತ್ರೆಯ ಬಿಲ್ ದಂಧೆಯ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದೇನೆ. ಅಲ್ಲದೆ ರಾಜ್ಯ ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಬಹಿರಂಗಪಡಿಸುತ್ತಿದ್ದೇನೆ. ಇದು ಸ್ಥಳೀಯ ಬಿಜೆಪಿ ನಾಯಕರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಕುಮ್ಮಕ್ಕಿನ ಮೇರೆಗೆ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು” ಎಂದು ಹೇಳಿದ್ದಾರೆ.
| |