ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು, ಬಿಲ್ಲವ ಜನಾಂಗಕ್ಕೆ ನ್ಯಾಯ ಒದಗಿಸಿ- ಬಿ.ಎನ್.ಶಂಕರ ಪೂಜಾರಿ
ಉಡುಪಿ ಜೂ.5(ಉಡುಪಿ ಟೈಮ್ಸ್ ವರದಿ): ಬಿಲ್ಲವ ಜನಾಂಗದ ಮೂರ್ತೆದಾರರು, ಗರಡಿ ಅರ್ಚಕರು, ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಪರಿಹಾರ ನೀಡುವಂತೆ ಬಿಲ್ಲವ ಸಮಾಜದ ಮುಖಂಡ ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಅವರು ಕರಾವಳಿಯ ಶಾಸಕರು ಹಾಗೂ ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶೇಂದಿ ತೆಗೆದು ಬದುಕುವ ಬಿಲ್ಲವ/ಈಡಿಗ ಜನಾಂಗದ ಮೂರ್ತೆದಾರಿಕೆ ಕಸುಬು ಲಾಕ್ ಡೌನ್ ನಿಂದಾಗಿ ಸಂಪೂರ್ಣ ನಿಂತು ಹೋಗಿದೆ., ಬಿಲ್ಲವ ಜನಾಂಗದ ಆರಾಧ್ಯ ದೇವರುಗಳಾದ ಕೋಟಿ-ಚೆನ್ನಯ್ಯ ಗರಡಿಗಳಲ್ಲಿ ಪೂಜೆ ಮಾಡುವ ಗರಡಿ ಅರ್ಚಕರು, ದರ್ಶನ ಪಾತ್ರಿಗಳು ಇನ್ನಿತರ ಸಿಬ್ಬಂದಿಗಳು ಇತರ ದೇವಸ್ಥಾನಗಳ ಸಿಬ್ಬಂದಿಗಳಂತೆ ಸಂಕಷ್ಟದಲ್ಲಿದ್ದು, ರಾಜ್ಯ ಸರಕಾರ ಇವರ ನೆರವಿಗೆ ಬರಬೇಕಾಗಿದೆ.
ಮೂರ್ತೆದಾರರ ಸಹಕಾರಿ ಸಂಘಗಳಲ್ಲಿ ಸ್ವಸಹಾಯ ಸಂಘವನ್ನು ರಚನೆ ಮಾಡಿಕೊಂಡಿರುವ 40 ಸಾವಿರಕ್ಕೂ ಮಿಕ್ಕಿದ ಸದಸ್ಯೆಯರು ನಿರುದ್ಯೋಗಿಗಳಾಗಿದ್ದರೆ, ಅಲ್ಲದೆ ಈಡಿಗ/ಬಿಲ್ಲವರ ಕುಲಕಸುಬು ಸ್ಥಬ್ದವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು, ಸಂಸದರು, ಸಚಿವರ ಸಹಿತ ಸರ್ವರು ಬಿಲ್ಲವ ಜನಾಂಗದ ಬಗ್ಗೆ ಗಮನ ಹರಿಸಿ, ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತಂದು, ಬಿಲ್ಲವ ಜನಾಂಗಕ್ಕೆ ನ್ಯಾಯ ಒದಗಿಸಿ ಕೂಡಲೇ ಪರಿಹಾರ ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.