ಉಡುಪಿ: ‘ಲಾ ಇನ್ ಆ್ಯಕ್ಷನ್’ ವತಿಯಿಂದ ಸಂತೆಕಟ್ಟೆಯ 90 ರಿಕ್ಷಾ ಚಾಲಕರಿಗೆ ಆಹಾರ ಕಿಟ್ ವಿತರಣೆ
ಉಡುಪಿ ಜೂ.5(ಉಡುಪಿ ಟೈಮ್ಸ್ ವರದಿ): ಕೊರೋನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಪ್ರಖ್ಯಾತ ನ್ಯಾಯವಾದಿ ಸಂಕಪ್ಪ ಎ. ರವರ ‘ಲಾ ಇನ್ ಆ್ಯಕ್ಷನ್’ ಸಂಸ್ಥೆಯ ವತಿಯಿಂದ, ಸಂತೆಕಟ್ಟೆಯ ತೊಂಬತ್ತು ರಿಕ್ಷಾ ಚಾಲಕರಿಗೆ ಆಹಾರ ಕಿಟ್ ನ್ನು ಇಂದು ವಿತರಿಸಲಾಯಿತು.
ದಿನಸಿ ವಸ್ತುಗಳ ಕಿಟ್ ಗಳನ್ನು ರಿಕ್ಷಾ ಚಾಲಕರಿಗೆ ಹಸ್ತಾಂತರಿಸಿದ ಸಂಸ್ಥೆಯ ಪ್ರವರ್ತಕರಾದ ನ್ಯಾಯವಾದಿ ಮತ್ತು ನೋಟರಿ ಸಂಕಪ್ಪ ಎ. ಅವರು ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ, ಕಷ್ಟದಲ್ಲಿ ಇರುವ ಅನೇಕ ಕುಟುಂಬಗಳಿಗೆ ಸಂಸ್ಥೆ ವತಿಯಿಂದ ನೆರವು ನೀಡುತ್ತಾ ಬಂದಿದ್ದು, ಈ ಬಾರಿ ರಿಕ್ಷಾ ಚಾಲಕರಿಗೆ ನೆರವು ನೀಡಬೇಕು ಎಂಬ ದೃಷ್ಟಿಯಿಂದ, ದೊಡ್ಡ ಸಂಖ್ಯೆಯಲ್ಲಿರುವ ಸಂತೆಕಟ್ಟೆಯ ರಿಕ್ಷಾ ಚಾಲಕರಿಗೆ ದಿನಸಿ ವಸ್ತುಗಳ ಕಿಟ್ ಗಳನ್ನು ನೀಡಲಾಗುತ್ತಿದೆ.
ಸಾರ್ವಜನಿಕ ಸೇವೆಯಲ್ಲಿರುವ ನಾವು, ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮ ಉದ್ದೇಶ ಎಂದರು.1989 ರಂದು ಆರಂಭವಾದ ‘ಲಾ ಇನ್ ಆ್ಯಕ್ಷನ್’ ಸಂಸ್ಥೆಯಲ್ಲಿ ಸುಮಾರು 18 ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯು ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿಯೂ ಸಂಕಷ್ಟದಲ್ಲಿದ್ದವರಿಗೆ 3 ಲಕ್ಷಕ್ಕೂ ಅಧಿಕ ಮೊತ್ತದ ದಿನಸಿ ವಸ್ತುಗಳನ್ನು ವಿತರಿಸಿತ್ತು. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಕಷ್ಟ ಕಾಲದಲ್ಲಿ ಸದಾ ನೆರವಾಗಲು ಸಂಸ್ಥೆ ಬದ್ದರಾಗಿರುವುದಾಗಿ ನ್ಯಾಯವಾದಿ ಸಂಕಪ್ಪ ಎ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶೇಖರ್ ಬೈಕಾಡಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರತ್ನಾಕರ ನಾಯ್ಕ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.