ಉಡುಪಿ: ಕಪ್ಪು ಶಿಲಿಂದ್ರ ಸೋಂಕಿಗೆ ಎರಡನೇ ಬಲಿ
ಉಡುಪಿ ಜೂ.5 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಜೊತೆ ಜೊತೆಗೆ ಸಾರ್ವಜನಿಕರು ಕಪ್ಪು ಶಿಲಿಂದ್ರ ಸೋಂಕಿನ ಬಗ್ಗೆಯೂ ಮುಂಜಾಗೃತೆ ವಹಿಸಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪತ್ತೆಯಾಗಿರುವ ಕಪ್ಪು ಶಿಲಿಂದ್ರ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
ಆದ್ದರಿಂದ ಸಾರ್ವಜನಿಕರು ಕೋವಿಡ್ ನಿಂದ ಗುಣಮುಖರಾದ ತಕ್ಷಣ ನಿರ್ಲಕ್ಷ್ಯ ವಹಿಸದೆ ಜಾಗರೂಕತೆ ವಹಿಸಬೇಕಾಗಿದೆ. ಈ ಮೂಲಕ ಕಪ್ಪು ಶಿಲಿಂದ್ರ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ. ಕಳೆದ ಕೆಲ ದಿನಗಳಿಂದ ಯಾವುದೇ ಕಪ್ಪು ಶಿಲಿಂದ್ರ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ 9 ಕಪ್ಪು ಶಿಲಿಂದ್ರ ಸೋಂಕಿನ ಪ್ರಕರಣಗಳು ಸಕ್ರಿಯವಾಗಿವೆಯಾದರೂ ಈ ವರೆಗೆ ಪತ್ತೆಯಾದ ಪ್ರಕರಣಗಳ ಪೈಕಿ ಹೆಚ್ಚಿನವು ಹೊರ ಜಿಲ್ಲೆಗೆ ಸೇರಿದ ಪ್ರಕರಣಗಳಾಗಿವೆ.
ಜಿಲ್ಲೆಯಲ್ಲಿ ಈ ವರೆಗೆ 16 ಮಂದಿಯಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದ್ದು ಈ ಪೈಕಿ 5 ಮಂದಿ ಗುಣಮುಖರಾಗಿದ್ದಾರೆ. ಈ ವರೆಗೆ ಇಬ್ಬರು ಸೋಂಕಿಗೆ ಬಲಿಯಾಗಿದ್ದು ಈ ಪೈಕಿ ಸಂತೆಕಟ್ಟೆಯ 76ರ ಹರೆಯ ಮಹಿಳೆ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಸಮೀಪದ ಕಡೆಕಾರಿನ 55 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಮಣಿಪಾಲದಲ್ಲಿ ಜಿಲ್ಲೆಯ ಇನ್ನೂ ಇಬ್ಬರು ಹಾಗೂ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಕುಂದಾಪುರ ನಾಗೂರಿನ 55 ವರ್ಷ ಪ್ರಾಯದ ಮಹಿಳೆ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.