ಉಡುಪಿ ಜೂ.4(ಉಡುಪಿ ಟೈಮ್ಸ್ ವರದಿ): ಸ್ಥಳೀಯ ಮೊಬೈಲ್ ವ್ಯಾಪಾರಿಗಳಿಗೆ ವಿಶೇಷ ಸಹಕಾರ ನೀಡುವಂತೆ ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಈ ಬಗ್ಗೆ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಸುಹಾಸ್ ಕಿಣಿ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, 2014 ರಲ್ಲಿ ಸ್ಥಾಪನೆಯಾದ ಏಮ್ರಾ(ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿ ಯೇಷನ್) ದೇಶದಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಸ್ಥಳೀಯ ಮೊಬೈಲ್ ವ್ಯಾಪಾರಿಗಳನ್ನು ಪ್ರತಿನಿಧಿಸುವ ರಾಷ್ಟ್ರಮಟ್ಟದ ಸಂಸ್ಥೆಯಾಗಿದೆ. ಮೊಬೈಲ್ ಉದ್ಯಮದ ಮೇಲೆ ಮೊಬೈಲ್ ವ್ಯಾಪಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಅವರ ಕುಟುಂಬದ ಸದಸ್ಯರುಗಳು ಒಟ್ಟು ಸೇರಿ ಸುಮಾರು 1 ಕೋಟಿಗೂ ಹೆಚ್ಚು ಜನರು ಅವಲಂಬಿತರಾಗಿರುತ್ತಾರೆ. ಕೋವಿಡ್ ತಡೆಗಟ್ಟಲು ಸರ್ಕಾರದ ಲಾಕ್ಡೌನ್ ಮಾರ್ಗಸೂಚಿಗಳನ್ನು ಸ್ಥಳೀಯ ಮೊಬೈಲ್ ವ್ಯಾಪಾರಿಗಳು ಶಿಸ್ತಿನಿಂದ ಪಾಲಿಸಿ,ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸರ್ಕಾರದ ಆದೇಶವನ್ನು ಬೆಂಬಲಿಸುತ್ತಿದ್ದಾರೆ.
ತೀವ್ರವಾಗಿ ಹರಡಿದ 2ನೇ ಮಹಾಮಾರಿ ಕೊರೋನಾ ಅಲೆ ಸ್ಥಳೀಯ ಮೊಬೈಲ್ ವ್ಯಾಪಾರಿಗಳಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಲಾಕ್ಡೌನ್ ಮತ್ತು ಈ-ಕಾಮರ್ಸ್ ಆನ್ಲೈನ್ ಕಂಪನಿಗಳಿಂದ ತೀವ್ರ ತೊಂದರೆಗೊಳಗಾದ ಅನೇಕ ಮೊಬೈಲ್ ವ್ಯಾಪಾರಿಗಳು ಈಗಾಗಲೇ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿರುತ್ತಾರೆ. ಸರ್ಕಾರವು ಈ-ಕಾಮರ್ಸ್ ಆನ್ಲೈನ್ ಕಂಪನಿಗಳ ಒತ್ತಡಕ್ಕೆ ಮಣಿದು, ಲಾಕ್ಡೌನ್ ತೆರವುಗೊಳಿಸುವ ಮೊದಲೇ ಆನ್ಲೈನ್ ಕಂಪನಿಗಳಿಗೆ ಮಾತ್ರ ಸರಕುಗಳ ಮಾರಾಟಕ್ಕೆ ಅನುಮತಿ ನೀಡಿರುವ ಪರಿಣಾಮದಿಂದ, ಮಾರುಕಟ್ಟೆಯ ಸಂಪೂರ್ಣ ಬೇಡಿಕೆಯ ಲಾಭವನ್ನು ಈ-ಕಾಮರ್ಸ್ ಆನ್ಲೈನ್ ಕಂಪನಿಗಳು ಮಾತ್ರ ಪಡೆಯಲಿವೆ.
ಇದರ ಪರಿಣಾಮವಾಗಿ ಸ್ಥಳೀಯ ವ್ಯಾಪಾರಿಗಳಿಗೆ ಇನ್ನು ಹಲವಾರು ತಿಂಗಳುಗಳಾದರೂ ಸಹ ವ್ಯಾಪಾರದಲ್ಲಿ ಯಾವುದೇ ಚೇತರಿಕೆ ಕಂಡುಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ, ಈ ಕಠಿಣ ಸಮಯದಲ್ಲಿ ವ್ಯಾಪಾರದ ಹೆಚ್ಚಿನ ಮಾರುಕಟ್ಟೆ ಪಾಲನ್ನು ಕಸಿಯಲು ಇ-ಕಾಮರ್ಸ್ ಕಂಪನಿಗಳು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಮತ್ತು ಎಫ್‌ಡಿಐ ನಿಯಮಗಳನ್ನು ಉಲ್ಲಂಘಿಸಿ ಅನೈತಿಕ ವ್ಯಾಪಾರ ಮಾಡುತ್ತಿದ್ದಾರೆ. ದೇಶದ ಹಿತಕ್ಕೆ ಮಾರಕವಾದ ಈ ವಿದೇಶಿ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಆದಾಯ ಇಲ್ಲದೆ ಕೇವಲ ಖರ್ಚುಗಳ ಮಹಾಪೂರದ ಬಗ್ಗೆ ಚಿಂತಿಸುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರವು ಸ್ಥಳೀಯ ಮೊಬೈಲ್ ವ್ಯಾಪಾರಿಗಳ ಬೆಂಬಲಕ್ಕೆ ನಿಂತು ಆನ್ಲೈನ್ ಕಂಪನಿಗಳ ಮೊಬೈಲ್ ಮಾರಾಟ ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ ಹಾಗೂ ಸ್ಥಳೀಯ ಮೊಬೈಲ್ ವ್ಯಾಪಾರಿಗಳ ಏಳಿಗೆಗಾಗಿ ಸೂಕ್ತ ಸಹಕಾರ ಹಾಗೂ ಪರಿಹಾರ ಘೋಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. | | |