ಮೇ ತಿಂಗಳಲ್ಲಿ 17 ಪೈಲಟ್ ಗಳ ಸಾವು, ಇಂಡಿಗೋ ಸಂಸ್ಥೆಯೊಂದರಲ್ಲೇ 10 ಮಂದಿ ಬಲಿ!
ನವದೆಹಲಿ: ಮಾರಕ ಕೊರೋನಾ ವೈರಸ್ 2ನೇ ಅಲೆ ವೇಳೆ ವ್ಯಾಪಕ ಹೊಡೆತ ತಿಂದಿರುವ ವಿಮಾನಯಾನ ಸಂಸ್ಥೆಗಳಿಗೆ ಗಾಯದ ಮೇಲೆ ಬರೆ ಎಂಬಂತೆ ಹತ್ತಾರು ಪೈಲಟ್ ಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕಳೆದ 2 ತಿಂಗಳಲ್ಲಿ ಉಲ್ಬಣಿಸಿದ ಮಾರಕ ಕೊರೋನಾ ವೈರಸ್ 2ನೇ ಅಲೆ ವೇಳೆ ಅದರಲ್ಲೂ ಮೇ ತಿಂಗಳೊಂದರಲ್ಲಿ ಯೇ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 17 ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಪ್ರಮುಖವಾಗಿ ಇಂಡಿಗೋ ವಿಮಾನಯಾನ ಒಂದೇ ಸಂಸ್ಥೆಯ 10 ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಏರ್ ಇಂಡಿಯಾದ ಹಿರಿಯ ಪೈಲಟ್ಗಳಾದ ಕ್ಯಾಪ್ಟನ್ ಹರ್ಶ್ ತಿವಾರಿ, ಜಿ ಪಿ ಎಸ್ ಗಿಲ್, ಪ್ರಸಾದ್ ಕರ್ಮಕರ್, ಸಂದೀಪ್ ರಾಣಾ ಮತ್ತು ಅಮಿತೇಶ್ ಪ್ರಸಾದ್ ಎಂಬ ಪೈಲಟ್ ಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಸಮಾಧಾನಕರ ಸುದ್ದಿ ಎಂದರೆ ಏರ್ ಏಷ್ಯಾ ಇಂಡಿಯಾ ಸಂಸ್ಥೆಯಲ್ಲಿ ಯಾವುದೇ ಪೈಲಟ್ ಗಳು ಸಾವನ್ನಪ್ಪಿಲ್ಲ.
ಇನ್ನು ಇಂಡಿಗೋ ಸಂಸ್ಥೆ ತನ್ನ ಪೈಲಟ್ ಗಳ ಸಾವಿನ ವಿಚಾರವಾಗಿ ಯಾವುದೇ ರೀತಿಯ ಸ್ಪಷ್ಟನೆ ನೀಡದಿದ್ದರೂ ತನ್ನ ಒಟ್ಟು 35 ಸಾವಿರ ಉದ್ಯೋಗಿಗಳ ಪೈಕಿ 20 ಸಾವಿರ ಮಂದಿ ಉದ್ಯೋಗಿಗಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆ. ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಇಂಡಿಗೊ ಸಂಸ್ಥೆಯ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಾಜ್ ರಾಘವನ್ ಅವರು, ‘ಜೂನ್ ಮಧ್ಯದ ವೇಳೆಗೆ ನಮ್ಮ ಸಂಪೂರ್ಣ ಉದ್ಯೋಗಿಗಳನ್ನು ಕೆಲಸಕ್ಕೆ ನಿಯೋಜಿಸಲು ನಾವು ಬದ್ದರಾಗಿದ್ದೇವೆ. ಅಂತೆಯೇ ಮೊದಲ ಅಲೆ ವೇಳೆ ಇಂಡಿಗೋ ಸಂಸ್ಥೆಯ ಕೆಲವೇ ಕೆಲವು ಪೈಲಟ್ ಗಳು ಮಾತ್ರ ಸೋಂಕಿಗೆ ತುತ್ತಾಗಿದ್ದರು. ಆದರೆ 2ನೇ ಅಲೆ ವೇಳೆ ಸುಮಾರು 450ಕ್ಕೂ ಅಧಿಕಸ ಪೈಲಟ್ ಗಳು ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದಾರೆ. ಮೂಲಗಳ ಪ್ರಕಾರ ಇಂಡಿಗೋ ಸಂಸ್ಥೆಯ welfare scheme and benevolent policy ಅಡಿಯಲ್ಲಿ ಮೃತ ಪೈಲಟ್ ಗಳಿಗೆ 5 ಕೋಟಿ ರೂ ಪರಿಹಾರ ನೀಡುವ ಸೌಲಭ್ಯವಿದೆ ಎಂದು ತಿಳಿದುಬಂದಿದೆ.
ಏರ್ ಏಷ್ಯಾ, ವಿಸ್ತಾರ ಸಂಸ್ಥೆಗಳ ಶೇ.99ರಷ್ಟು ಉದ್ಯೋಗಿಗಳಿಗೆ ಲಸಿಕೆ
ಇನ್ನು ಮತ್ತೆರಡು ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಏಷ್ಯಾ, ವಿಸ್ತಾರ ವಿಮಾನಯಾನ ಸಂಸ್ಥೆಗಳು ತಮ್ಮ ಶೇ.96ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಹೇಳಿಕೊಂಡಿವೆ. ವಿಸ್ತಾರ ತನ್ನ ಶೇ.99ರಷ್ಟು ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಹೇಳಿದ್ದು, ಏರ್ ಏಶ್ಯಾ ಸಂಸ್ಥೆ ಶೇ.96ರಷ್ಚು ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದೆ. ಅಂತೆಯೇ ಕೋವಿಡ್ ಚಿಕಿತ್ಸೆಯಲ್ಲಿರುವ ಮತ್ತು ಕೋವಿಡ್ ನಿಂದ ಚೇತರಿಸಿಕೊಂಡ ಸಿಬ್ಬಂದಿಗಳನ್ನು ಈ ದತ್ತಾಂಶಕ್ಕೆ ಬಳಸಿಕೊಂಡಿಲ್ಲ ಎಂದೂ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಲಸಿಕೆ ಕೊರತೆ: ಏರ್ ಇಂಡಿಯಾ ಸಿಬ್ಬಂದಿಗಳಿಗೆ ಮೇ 15ರಿಂದ ಲಸಿಕೆ
ಇದೇ ವೇಳೆ ದೇಶದಲ್ಲಿ ಕೋವಿಡ್ ಲಸಿಕೆಯಲ್ಲಿ ಕೊರತೆಯಿಂದಾಗಿ ಏರ್ ಇಂಡಿಯಾ ಸಂಸ್ಥೆ ಕಳೆದ ಮೇ 15ರಿಂದ ತನ್ನ ಸಿಬ್ಬಂದಿಗ ಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಿದೆ.ಅದೂ ಕೂಡ ಆದ್ಯತೆಯ ಮೇರೆಗೆ ಲಸಿಕೆಗಳನ್ನು ಸಿಬ್ಬಂದಿಗಳಿಗೆ ನೀಡಲಾಗುತ್ತಿದ್ದು , ತಿಂಗಳ ಕೊನೆಯಲ್ಲಿ ಏರ್ ಇಂಡಿಯಾದ ಎಲ್ಲ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.