ಬೆಂಗಳೂರಿನಲ್ಲಿ ಚೀನಾ ಮೂಲದ ವ್ಯಕ್ತಿಯ ಉದ್ಯಮ: 4 ಕೋಟಿ ರೂ ಮೌಲ್ಯದ ಚೀನಾ ಸರಕುಗಳು ವಶ!

ಬೆಂಗಳೂರು: ಚೀನಾದ ವುಹಾನ್ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಉದ್ಯಮದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಗೋದಾಮಿನಿಂದ ಬರೊಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಚೀನಾ ಸರಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಚೀನಾ ವ್ಯಕ್ತಿಗೆ ಸಂಬಂಧಿಸಿದ 60 ಜಿಎಸ್ ಟಿ ನೋಂದಣಿಗಳನ್ನು ಹೊಂದಿದ್ದ ಸಂಸ್ಥೆಗಳ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 25,446 ಚೀನಾ ಉತ್ಪಾದಿತ ಎಲೆಕ್ಟ್ರಾನಿಕ್ ಹಾಗೂ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ದಾಳಿ ನಡೆದಿದೆ ಎಂದು ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಭೋಗ್ಯಕ್ಕೆ ಪಡೆದ ಪ್ರದೇಶದಲ್ಲಿ ವ್ಯಕ್ತಿಯೋರ್ವ ಜಿಎಸ್ ಟಿ ಕಾಯ್ದೆಯಡಿ ಕೇಂದ್ರ ಹಾಗೂ ರಾಜ್ಯದ ವ್ಯಾಪ್ತಿಯಲ್ಲಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚೀನಾ ಉತ್ಪಾದಿತ ಸರಕುಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು 60 ಸಂಸ್ಥೆಗಳ ನೋಂದಣಿಗಳನ್ನು ಮಾಡಿಸಿದ್ದ.

ಆದರೆ ಈ ಪೈಕಿ ಹಲವು ಸಂಸ್ಥೆಗಳ ನೋಂದಣಿ ಅಕ್ರಮವಾಗಿದ್ದದ್ದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಬಹುತೇಕ ಸಂಸ್ಥೆಗಳು ರಿಟರ್ನ್ಸ್ ಸಲ್ಲಿಕೆ ಮಾಡಿಲ್ಲದೇ ಇರುವುದು ಅಥವಾ ನಿಲ್ ರಿಟರ್ನ್ಸ್ ಸಲ್ಲಿಸಿರುವುದೂ ಸಹ ಬೆಳಕಿಗೆ ಬಂದಿದೆ.2017-18 ರಲ್ಲಿ ಒಂದು ಉದ್ಯಮ, 2018-19 ರಲ್ಲಿ 43 ಉದ್ಯಮ 2019-20 ರಲ್ಲಿ 14, 2020-21 ರಲ್ಲಿ 2 ಉದ್ಯಮಗಳು ನೋಂದಣಿಯಾಗಿವೆ.

60 ಸಂಸ್ಥೆಗಳ ಪೈಕಿ ಬಹುತೇಕ ಸಂಸ್ಥೆಗಳು ಖಾಸಗಿ ಸಂಸ್ಥೆಗಳಾಗಿದ್ದು, 24 ವ್ಯಕ್ತಿಗಳು 58 ಸಂಸ್ಥೆಗಳಿಗೆ ನಿರ್ದೇಶಕರಾಗಿರುತ್ತಿದ್ದರು ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ. ಆದರೆ ದಾಳಿಯ ವೇಳೆ ಚೀನಾದ ವ್ಯಕ್ತಿ ಅಥವಾ ತೆರಿಗೆ ವಿಧಿಸಬಹುದಾದ 59 ನೋಂದಾಯಿತ ಸಂಸ್ಥೆಗಳ ವ್ಯಕ್ತಿಗಳು ಪತ್ತೆ ಇರಲಿಲ್ಲ. ವುಹಾನ್ ನಿಂದ ಚೀನಾ ವ್ಯಕ್ತಿ ಈ ಉದ್ಯಮಗಳನ್ನು ತನ್ನ ಸಹಾಯಕರು ಅಥವಾ ಉದ್ಯೋಗಿಗಳ ಮೂಲಕ 2020 ರ ಜನವರಿಯಿಂದ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದ ಎಂದು ವಾಣಿಜ್ಯ ತೆರಿಗೆ ಆಯುಕ್ತ ಎಂಎಸ್ ಶ್ರೀಕರ್ ತಿಳಿಸಿದ್ದಾರೆ. ಗೋದಾಮನ್ನು ಸೀಲ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!