| ಹೊಸದಿಲ್ಲಿ, ಜೂ.3: ಕೊರೋನಾ ನಿಯಂತ್ರಿಸುವ ಭಾರತದ ಪ್ರಯತ್ನಕ್ಕೆ ರಾಮ್ ದೇವ್ ಸರಿಪಡಿಸಲಾಗದ ಹಾನಿ ಎಸಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹೇಳಿದೆ.
ಈ ಬಗ್ಗೆ ಪತ್ರ ಬರೆದಿರುವ ಐಎಂಎ, ಕೊರೋನಾ ವಿರುದ್ಧದ ರಾಷ್ಟ್ರೀಯ ನಿಯಮಾವಳಿ ಮತ್ತು ಲಸಿಕೀಕರಣ ಅಭಿಯಾನದ ವಿರುದ್ಧ ಮಾತನಾಡಿ ರಾಮ್ ದೇವ್ ಜನತೆಯ ಮನದಲ್ಲಿ ಗೊಂದಲ ಮೂಡಿಸಿದ್ದಾರೆ. ಇದು ಘೋರ ರಾಷ್ಟ್ರವಿರೋಧಿ ಕೃತ್ಯವಾಗಿದೆ. ಆದ್ದರಿಂದ ರಾಮ್ ದೇವ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಐಎಂಎ ಆಗ್ರಹಿಸಿದೆ.
ಸೋಂಕಿನ ಸಂದರ್ಭದಲ್ಲಿ ಐಎಂಎ ಪ್ರಮುಖ ಪಾತ್ರ ನಿರ್ವಹಿಸಿದೆ. ಭಾರತ ಸರಕಾರದೊಂದಿಗೆ ಮತ್ತು ಎಲ್ಲಾ ರಾಜ್ಯ ಸರಕಾರಗಳೊಂದಿಗೆ ಜತೆಗೂಡಿ ಕಾರ್ಯನಿರ್ವಹಿಸಿದ್ದೇವೆ. ಆದರೆ ರಾಮ್ ದೇವ್ ರಾಷ್ಟ್ರೀಯ ಲಸಿಕೀಕರಣ ಅಭಿಯಾನ ಮತ್ತು ನಿಯಮಾವಳಿ ವಿರುದ್ಧ ಹೇಳಿಕೆ ನೀಡಿದ್ದಾರೆ. ತಮ್ಮ ವಾಣಿಜ್ಯ ಸರಕುಗಳ ಮಾರುಕಟ್ಟೆಗೆ ಈ ಅವಕಾಶವನ್ನು ಬಳಸಿಕೊಳ್ಳುವ ಉದ್ದೇಶದ ಹೇಳಿಕೆ ಇದಾಗಿದೆ. ಈ ಹೇಳಿಕೆಯಿಂದ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಅವರು ಸರಿಪಡಿಸಲಾಗದ ಹಾನಿ ಎಸಗಿದ್ದಾರೆ ಎಂದಿದೆ.
ಇದುವರೆಗೆ 1,300 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಇಂತಹ ಇತಿಮಿತಿಯ ನಡುವೆಯೂ ಭಾರತದ ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯಕ್ಷೇತ್ರದ ಕಾರ್ಯಕರ್ತರು ದಣಿವರಿಯದೆ ಹೋರಾಡಿದ್ದಾರೆ. ಹೀಗಿರುವಾಗ ಐಎಂಎ ಮತ್ತು ಅದರ ರಾಷ್ಟ್ರೀಯ ಅಧ್ಯಕ್ಷರ ತೇಜೋವಧೆಗೆ ರಾಮ್ ದೇವ್ ಹಾಗೂ ಅವರ ಬೆಂಬಲಿಗರು ವಿವಿಧ ರೀತಿಯ ತಂತ್ರಗಾರಿಕೆ ಬಳಸಿದ್ದಾರೆ. ಆದ್ದರಿಂದ ರಾಮ್ ದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಮುಂದುವರಿಯಲಿದೆ ಎಂದು ಹೇಳಿದೆ.
ಅಲೋಪಥಿ ವೈದ್ಯರು ಹಾಗೂ ಅಲೋಪಥಿ ವೈದ್ಯಶಾಸ್ತ್ರದ ಬಗ್ಗೆ ಯೋಗಗುರು ರಾಮ್ ದೇವ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಜೂ.1 ರಂದು ದೇಶಾದ್ಯಂತ ಕರಾಳ ದಿನಾಚರಣೆ ಆಚರಿಸಲಾಯಿತು. ಇದನ್ನು ಐಎಂಎ ಬೆಂಬಲಿಸಿದ್ದು ರಾಮ್ ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. | |