| ಮುಂಬೈ,ಜೂ.3: ಹಿರಿಯ ನಾಗರಿಕರಿಗೆ ಮನೆಗಳಲ್ಲಿ ಯಾಕೆ ಲಸಿಕೆ ನೀಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ಕೆ ಹೈಕೋರ್ಟ್ ಪ್ರಶ್ನಿಸಿದೆ.
75 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು, ಭಿನ್ನಸಾಮರ್ಥ್ಯದವರು, ಹಾಸಿಗೆ ಹಿಡಿದವರು ಮತ್ತು ಗಾಲಿ ಕುರ್ಚಿ ಅವಲಂಭಿಸಿರುವವರಿಗೆ ಮನೆ ಮನೆ ಲಸಿಕೀಕರಣ ಅಭಿಯಾನವನ್ನು ಆರಂಭಿಸುವಂತೆ ನ್ಯಾಯವಾದಿಗಳಾದ ಧೃತಿ ಕಪಾಡಿಯಾ ಹಾಗೂ ಕುನಾಲ್ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಆಲಿಸಿದ ಮುಂಬೈ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೋವಿಡ್-19 ಲಸಿಕೀಕರಣ ಅಭಿಯಾನಗಳು ಈಗ ಹಲವಾರು ಹೌಸಿಂಗ್ ಸೊಸೈಟಿ (ವಸತಿ ಸಂಕೀರ್ಣ)ಗಳಲ್ಲಿ ನಡೆಯುತ್ತಿರುವಾಗ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಹಿರಿಯ ನಾಗರಿಕರು ಅದರಲ್ಲೂ ವಿಶೇಷವಾಗಿ ಭಿನ್ನಸಾಮರ್ಥ್ಯದವರು ಹಾಗೂ ಹಾಸಿಗೆ ಹಿಡಿದ ವ್ಯಕ್ತಿಗಳಿಗೆ ಅವರ ಮನೆಗಳಲ್ಲಿ ಯಾಕೆ ಲಸಿಕೆ ನೀಡಬಾರದು ಎಂದು ಪ್ರಶ್ನಿಸಿದೆ.
ಮನೆಮನೆ ಲಸೀಕರಣ ಕಾರ್ಯಕ್ರಮವು ಅಸಾಧ್ಯವೆಂದು ಕೇಂದ್ರ ಸರಕಾರದ ನೀತಿ ಹೇಳುತ್ತಿದೆಯಾದರೂ, ವಸಾಯಿ-ವಿರಾರ್ ಮಹಾನಗರ ಪಾಲಿಕೆಯು ಪಾಲ್ಘರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆರಂಭಿಸಿದೆ ಎಂದು ಕಪಾಡಿಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಕಾಲಾವಕಾಶ ನೀಡಬೇಕೆಂದು ಕೋರಿದ್ದು, ನ್ಯಾಯಪೀಠವು ಮುಂದಿನ ಆಲಿಕೆಯನ್ನು ಜೂನ್ 8ಕ್ಕೆ ಮುಂದೂಡಿದೆ ಎಂದು ತಿಳಿದು ಬಂದಿದೆ. | |